ಯುಎಇನಲ್ಲಿಯೂ ರೂಪಾಂತರಿತ ವೈರಸ್ ಸೋಂಕು ಪ್ರಕರಣಗಳು ಪತ್ತೆ

ಕೈರೋ/ಯುಎಇ,ಡಿ.30: ರೂಪಾಂತರಿತ ಕೊರೋನ ವೈರಸ್ ಸೋಂಕಿನ ಸೀಮಿತ ಸಂಖ್ಯೆಯ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿರುವುದಾಗಿ ಯುಎಇ ಪ್ರಕಟಿಸಿದೆ.
ಯುಎಇ ಸರಕಾರದ ವಕ್ತಾರ ಉಮರ್ ಅಲ್ ಹಮ್ಮಾದಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರೂಪಾಂತರಿತ ಕೊರೋನ ವೈರಸ್ ಸೋಂಕು ದೃಢಪಟ್ಟವರೆಲ್ಲರೂ ವಿದೇಶಕ್ಕೆ ಪ್ರಯಾಣಿಸಿದ್ದರೆಂದು ತಿಳಿಸಿದರು. ಆದರೆ ಎಲ್ಲೆಲ್ಲಿ ಹಾಗೂ ಎಷ್ಟು ಸಂಖ್ಯೆಯ ರೂಪಾಂತರಿತ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆಯೆಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.
ಅತ್ಯಂತ ವೇಗವಾಗಿ ಹರಡುವ ಕೊರೋನ ವೈರಸ್‌ನ ರೂಪಾಂತರಿ ಪ್ರಭೇದಗಳು ತಮ್ಮ ಲ್ಲಿ ಪತ್ತೆಯಾಗಿರುವುದಾಗಿ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕ ಪ್ರತ್ಯೇಕವಾಗಿ ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕೆಲವು ದೇಶಗಳು, ಆ ಎರಡು ರಾಷ್ಟ್ರಗಳಿಗೆ ವಿಮಾನ ಸಂಚಾರವನ್ನು ನಿಷೇಧಿಸಿದ್ದವು.
ಓಮಾನ್‌ನಲ್ಲಿ ರೂಪಾಂತರಿ ಕೊರೋನ ವೈರಸ್ ಸೋಂಕಿನ ನಾಲ್ಕು ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಆ ದೇಶದ ಅರೋಗ್ಯ ಸಚಿವ ಅಹ್ಮದ್ ಅಲ್ ಸೈದಿ ತಿಳಿಸಿದ್ದಾರೆ. ಯುಎಇ ತನ್ನ ಗಡಿಗಳನ್ನು ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನು ನಿರ್ಬಂಧಿಸಿಲ್ಲ. ಆದರೆ ನೆರೆಯ ರಾಷ್ಟ್ರವಾದ ಸೌದಿ ಆರೇಬಿಯ ಸೋಮವಾರ ತನ್ನ ದೇಶದ ವಾಯು,ಭೂಮಿ ಹಾಗೂ ಸಮುದ್ರ ಮಾರ್ಗಗಳ ಮೇಲಿನ ನಿಷೇಧವನ್ನು ಇನ್ನೊಂದು ವಾರದವರೆಗೆ ವಿಸ್ತರಿಸಿದೆ.
ಯುಎಇನಲ್ಲಿ ಕಳೆದ 24 ತಾಸುಗಳಲ್ಲಿ ಕೋವಿಡ್-19 ಸೋಂಕಿನ 1506 ಹೊಸ ಪ್ರಕರಣಗಳು ವರದಿಯಾಗಿವೆ.ಇದರೊಂದಿಗೆ ಆ ದೇಶದಲ್ಲಿ ಸೋಂಕಿತರ ಸಂಖ್ಯೆ 2,04, 369ಕ್ಕೇರಿದೆ.







