ರಸ್ತೆಗಳಿಗೆ ಮುಸ್ಲಿಮರ ಹೆಸರಿಟ್ಟರೆ ಕೋಮು ಸಾಮರಸ್ಯಕ್ಕೆ ಧಕ್ಕೆ: ತೇಜಸ್ವಿ ಸೂರ್ಯ, ಅನಂತಕುಮಾರ ಹೆಗಡೆ ಆಕ್ಷೇಪ

ಬೆಂಗಳೂರು, ಡಿ. 31: ಬಿಬಿಎಂಪಿಯ ವಾರ್ಡ್ ಸಂಖ್ಯೆ-135ರ ಮುಸ್ಲಿಮ್ ಬಾಹುಳ್ಯವಿರುವ ಇಲ್ಲಿನ ಪಾದರಾಯನಪುರದ ಅಡ್ಡರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನಿಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತೀರ್ಮಾನಕ್ಕೆ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗುರುವಾರ ಈ ಸಂಬಂಧ ಸಂಸದರಿಬ್ಬರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು, ಪಾದರಾಯನಪುರದ ಅಡ್ಡರಸ್ತೆಗಳಿಗೆ ಸಮಾಜ ಸೇವಕರ ಹೆಸರಿಡಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಸಮಾಜ ಸೇವಕರ ಹೆಸರಿನಲ್ಲಿ ಮುಸ್ಲಿಮರ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಲಾಗಿದೆ ಎಂದು ದೂರಿದ್ದಾರೆ.
ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮರ ಹೆಸರುಗಳನ್ನು ನಾಮಕರಣ ಮಾಡುವ ವಿಚಾರವು ಭಾರತ ಮತ್ತು ಪಾಕಿಸ್ತಾನ ವಿಭಜನತೆ ಮೂಲವಾಗಿದ್ದ ದ್ವಿರಾಷ್ಟ್ರ ಸಿದ್ಧಾಂತದ ಪಳಯುಳಿಕೆಯಂತಾಗುತ್ತದೆ. ಈ ನಿರ್ಧಾರ ಬೇಜವಾಬ್ದಾರಿತನದ ಪರಮಾವಧಿ. ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಹೋರಾಡಿದ ವೀರ ಸೈನಿಕರು, ರಾಷ್ಟ್ರದ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಬಹುದು. ಆದರೆ, ಮುಸ್ಲಿಮರ ಹೆಸರನ್ನು ಇಡುವುದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಆಕ್ಷೇಪಿಸಿದ್ದಾರೆ.
ಒಂದೊಮ್ಮೆ ರಾಜ್ಯದ ಇತರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳೂ ಇದೇ ರೀತಿಯ ನಿರ್ಣಯ ತೆಗೆದುಕೊಂಡಲ್ಲಿ ಪರಿಸ್ಥಿತಿ ಊಹೆಗೂ ನಿಲುಕದಂತಿರುತ್ತದೆ. ಇದು ಕೋಮುಸಾಮರಸ್ಯ ಕೆಡುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತೇಜಸ್ವಿ ಸೂರ್ಯ ಮತ್ತು ಅನಂತಕುಮಾರ್ ಹೆಗಡೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.








