ಫಾಸ್ಟ್‌ಟ್ಯಾಗ್ ಕಡ್ಡಾಯ: ಅಂತಿಮ ಗಡುವು ವಿಸ್ತರಣೆ

ಹೊಸದಿಲ್ಲಿ: ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಮೂಲಕವೇ ರಾಷ್ಟ್ರೀಯ ಹೆದ್ದಾರಿ ಜಾಲಗಳಲ್ಲಿ ಟೋಲ್ ಶುಲ್ಕಗಳನ್ನು ಸಂಗ್ರಹಿಸಲು ಕೊನೆಯ ದಿನಾಂಕವನ್ನ್ನು ರಸ್ತೆ ಸಾರಿಗೆ ಸಚಿವಾಲಯ ಇಂದು ಫೆಬ್ರವರಿ 15ರ ತನಕ ವಿಸ್ತರಿಸಿದೆ.
ಜನವರಿ 1ಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದ ಸಾರಿಗೆ ಸಚಿವ ನಿತಿನ್ ಗಡ್ಕರಿ, ಫಾಸ್ಟ್‌ಟ್ಯಾಗ್ ದೇಶದ ಎಲ್ಲ ವಾಹನಗಳಿಗೆ ಕಡ್ಡಾಯ ಎಂದು ಹೇಳಿಕೆ ನೀಡಿದ್ದರು.
ಜನವರಿ 1ರಿಂದ ಟೋಲ್ ಶುಲ್ಕ ಪಾವತಿಯಲ್ಲಿ ನಗದು ವ್ಯವಹಾರಗಳನ್ನು ಸಂಪೂರ್ಣ ದೂರ ಇಡಲಾಗುವುದು ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ(ಎನ್‌ಎಚ್‌ಎಐ)ಈ ಹಿಂದೆ ಪ್ರಕಟಿಸಿತ್ತು. ಜನವರಿ 1ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಹೊರಡಿಸಿತ್ತು. ಇದೀಗ ಅಂತಿಮ ಗಡುವನ್ನು 2021ರ ಫೆ.15ರ ತನಕ ವಿಸ್ತರಿಸಿ ಆದೇಶ ಹೊರಡಿಸಿದೆ.
ಫಾಸ್ಟ್‌ಟ್ಯಾಗ್ ಇಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಭಾರತದಲ್ಲಿ ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ವಹಿಸುತ್ತಿದೆ.2016ರಲ್ಲಿ ಇದನ್ನು ಆರಂಭಿಸಲಾಗಿತ್ತು.





