2020-21ನೆ ಶೈಕ್ಷಣಿಕ ಸಾಲಿನ ಶಾಲಾ ತರಗತಿ ನಾಳೆಯಿಂದ ಆರಂಭ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಬೆಂಗಳೂರು, ಡಿ.31: ಕೋವಿಡ್ ಆತಂಕದಿಂದಾಗಿ ಕಳೆದ ಮಾರ್ಚ್ ನಿಂದ ಬಂದ್ ಮಾಡಲಾಗಿದ್ದ 2020-21ನೆ ಶೈಕ್ಷಣಿಕ ಸಾಲಿನ ಶಾಲಾ ತರಗತಿಗಳನ್ನು ನಾಳೆಯಿಂದ(ಜ.1) ಆರಂಭಿಸಲಾಗುತ್ತಿದೆ.
ಶಾಲೆಗಳನ್ನು ಪ್ರಾರಂಭಿಸಬೇಕೆ, ಬೇಡವೇ ಎಂಬ ಗೊಂದಲ, ಚರ್ಚೆಗಳ ನಂತರ ತಜ್ಞ ವೈದ್ಯ ಸಮಿತಿಯ ಸಲಹೆ ಹಾಗೂ ಮಾರ್ಗಸೂಚಿ ಮೇರೆಗೆ ನಾಳೆಯಿಂದ ಎಸೆಸೆಲ್ಸಿ (10) ಹಾಗೂ ದ್ವಿತಿಯ ಪಿಯುಸಿ(12ನೆ) ತರಗತಿಗಳು ಆರಂಭಗೊಳ್ಳುತ್ತಿದೆ. ಹಾಗೂ 6ರಿಂದ 9ನೆ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ನಡೆಯಲಿದೆ.
ಶಾಲೆಗಳು ಆರಂಭವಾಗುತ್ತಿರುವುದರಿಂದ ಪೋಷಕರಿಗೆ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಶಾಲಾ ಅವಧಿಯಲ್ಲಿ, ತರಗತಿಯ ಒಳಗೆ, ತರಗತಿಯ ಹೊರಗೆ ವಿದ್ಯಾರ್ಥಿಗಳು, ಶಿಕ್ಷಕರು ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರಕಾರ ಪ್ರಕಟಿಸಿದೆ.
ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು: ಶಾಲಾ ಮುಖ್ಯಸ್ಥರು- ಶಾಲೆ ಮತ್ತು ಶಾಲಾ ಆವರಣದ ಸ್ವಚ್ಚತೆಗೆ ಜಾಗ್ರತೆ ವಹಿಸವುದು. ತರಗತಿ ಕೋಣೆ, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಕೊಠಡಿ, ದಾಸ್ತಾನು ಕೊಠಡಿ, ಶೌಚಾಲಯ ಸೇರಿದಂತೆ ಮತ್ತಿತರ ಜಾಗಗಳ ಸ್ವಚ್ಚತೆಯ ಕುರಿತು ಖಾತರಿ ಪಡಿಸಿಕೊಳ್ಳುವುದು.
-ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಪೋಷಕರ ಲಿಖಿತ ಒಪ್ಪಿಗೆ ಪಡೆಯುವುದು, ನಿಗದಿತ ದೈಹಿಕ ಅಂತರದೊಂದಿಗೆ ಕಲಿಸುವುದು, ಎಸ್‍ಡಿಎಂಸಿ, ಆಡಳಿತ ಮಂಡಳಿ, ಸಮುದಾಯ, ಇತರೆ ಇಲಾಖೆಗಳ ಸಮನ್ವಯದೊಂದಿಗೆ ಸುರಕ್ಷಿತವಾಗಿ ಶಾಲೆ, ವಿದ್ಯಾಗಮ ನಡೆಸುವುದು. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.
-ಪ್ರತಿ ಶಾಲೆಯಲ್ಲಿ ಕೋವಿಡ್-19 ಲಕ್ಷಣ ಕಂಡುಬರುವ ವಿದ್ಯಾರ್ಥಿ, ಸಿಬ್ಬಂದಿ ನಿರ್ವಹಣೆಗಾಗಿ ಪ್ರತ್ಯೇಕ ಕೊಠಡಿ ನಿರ್ವಹಣೆ.
ಪೋಷಕರ ಜವಾಬ್ದಾರಿಗಳು: ನಿಯಮಿತವಾಗಿ ಮಗುವಿನ ಆರೋಗ್ಯವನ್ನು ಗಮನಿಸಿ, ಅವಶ್ಯವಿದ್ದಲ್ಲಿ ವೈದ್ಯಕೀಯ ಸಲಹೆ ಪಡೆಯಿರಿ. ಮನೆಯಲ್ಲಿ ಉತ್ತಮ ನೈರ್ಮಲ್ಯ, ಶುಚಿತ್ವದ ಅಭ್ಯಾಸಗಳನ್ನು ರೂಢಿ ಮಾಡಿಸಿ. ಶಾಲೆಯೊಂದಿಗೆ ಉತ್ತಮ ಸಹಕಾರ ನೀಡುವುದು. ಮಗುವನ್ನು ಮಾಸ್ಕ್ ನೊಂದಿಗೆ ಶಾಲೆಗೆ ಕಳುಹಿಸುವುದು. ಮನೆಯಿಂದಲೇ ಶುದ್ಧ ಕುಡಿಯುವ ನೀರನ್ನು ಕಳುಹಿಸುವುದು ಅಪೇಕ್ಷಣೀಯ. ಶಾಲೆಯ ಸುರಕ್ಷತಾ ಪ್ರಯತ್ನಗಳನ್ನು ಬಲಪಡಿಸಲು ಶಾಲೆಗೆ ಬೆಂಬಲವನ್ನು ನೀಡುವುದು.
ವಿದ್ಯಾರ್ಥಿಗಳ ಜವಾಬ್ದಾರಿಗಳು: ಮಾಸ್ಕ್ ನೊಂದಿಗೆ ಶಾಲೆಗೆ ಹಾಜರಾಗಿ ಮತ್ತು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಶಾಲೆಗೆ ಬರುವಾಗ ಮತ್ತು ಶಾಲೆಯಿಂದ ಮನೆಗೆ ಹೋಗುವಾಗ ಕಡ್ಡಾಯವಾಗಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆಯುವುದು. ಬೇರೆಯವರೊಂದಿಗೆ ಮಾಸ್ಕ್, ಲೋಟ, ಊಟದ ಬಾಕ್ಸ್ ಗಳನ್ನು, ಆಹಾರ ಅಥವಾ ಪಾನೀಯಗಳನ್ನು ಹಾಗೂ ಪೆನ್ನು, ಪೆನ್ಸಿಲ್, ಪುಸ್ತಕಗಳನ್ನು ಹಂಚಿಕೊಳ್ಳದಿರುವುದು. ವಿದ್ಯಾರ್ಥಿಗಳಿಗೆ ಅನಾರೋಗ್ಯವಿದ್ದರೆ, ಪೋಷಕರಿಗೆ ಹೇಳಿ ಮನೆಯಲ್ಲಿಯೇ ಉಳಿದುಕೊಳ್ಳುವುದು.







