ಮನೆ ಕಳೆದುಕೊಂಡ ರಫೀಕ್ ಕುಟುಂಬಕ್ಕೆ ತನ್ನ ಮನೆಯಲ್ಲಿ ಆಸರೆ ನೀಡಿದ ಮೀರಾ ಬಾಯಿ

Photo: indianexpress.com
ಉಜ್ಜಯನಿ : ಮಧ್ಯ ಪ್ರದೇಶದ ಉಜ್ಜಯನಿಯಲ್ಲಿ ಡಿಸೆಂಬರ್ 26ರಂದು ಆಯೋಜಿಸಲಾಗಿದ್ದ ಭಾರತೀಯ ಜನತಾ ಯುವ ಮೋರ್ಚಾ ರ್ಯಾಲಿ ಇಲ್ಲಿನ ಬೇಗಂ ಬಾಘ್ ಪ್ರದೇಶದ ಸಮೀಪದಿಂದ ಸಾಗುತ್ತಿದ್ದ ವೇಳೆ ಅಲ್ಲಿನ ಮನೆಯೊಂದರ ಛಾವಣಿಯಿಂದ ಮೆರಣಣಿಗೆಯತ್ತ ಕಲ್ಲೆಸೆಯಲಾಗಿದ್ದ ಘಟನೆಯ ತರುವಾಯ ಪೊಲೀಸ್ ಕಾರ್ಯಾಚರಣೆಯಲ್ಲಿ ಅಬ್ದುಲ್ ರಫೀಕ್ ಎಂಬವರ ಮನೆಯನ್ನು ನೆಲಸಮಗೊಳಿಸಲಾಗಿದೆ. ಅಂದಿನಿಂದ ರಫೀಕ್ ಕುಟುಂಬದ 19 ಸದಸ್ಯರು ತಮ್ಮ ನೆರೆಮನೆಯ ಮಹಿಳೆ ಮೀರಾ ಬಾಯಿ ನಿವಾಸದಲ್ಲಿ ಆಶ್ರಯ ವಪಡೆದಿದ್ದಾರೆ. ಘಟನೆ ಸಂಬಂಧ ಪೊಲೀಸರು ರಫೀಕ್ ಎರಡು ಮಹಡಿಯ ಮನೆಯನ್ನು ನೆಲಸಮಗೊಳಿಸಲು ಯಾವುದೇ ಕಾರಣವಿರಲಿಲ್ಲ ಎಂದು ಮೀರಾ ಬಾಯಿ ಕೂಡ ಒಪ್ಪುತ್ತಾರೆ ಎಂದು indianexpress.com ವರದಿ ಮಾಡಿದೆ.
ದಿನಗೂಲಿ ಕಾರ್ಮಿಕನಾಗಿರುವ ರಫೀಕ್ ತನಗೆ ಸರಕಾರ ಒದಗಿಸಿದ್ದ ಪಟ್ಟಾ ಜಮೀನಿನಲ್ಲಿ ಕಳೆದ 35 ವರ್ಷಗಳ ಅವಧಿಯಲ್ಲಿ ಈ ಮನೆಯನ್ನು ಹಂತ ಹಂತವಾಗಿ ನಿರ್ಮಿಸಿದ್ದರು.
ಯುವ ಮೋರ್ಚಾ ರಾಕ್ಲಿ ಮೇಲೆ ಹೀನಾ ಮತ್ತು ಯಾಸ್ಮೀನ್ ಎಂಬ ಇಬ್ಬರು ಮಹಿಳೆಯರು ಮೀರಾ ಅವರ ಮನೆಯ ಛಾವಣಿಯಲ್ಲಿ ನಿಂತುಕೊಂಡು ಕಲ್ಲೆಸೆದಿದ್ದರು. ಆದರೆ ನಂತರ ಮೀರಾ ಹಿಂದು ಎಂದು ತಿಳಿದ ಪೊಲೀಸರು ಹತ್ತಿರದ ತನ್ನ ಮನೆಯನ್ನು ಧ್ವಂಸಗೊಳಿಸಿದ್ದರು ಎಂದು ರಫೀಕ್ ಆರೋಪಿಸಿದ್ದಾರೆ. ತನ್ನ ಪತ್ನಿ ಇಬ್ಬರು ಸೊಸೆಯಂದಿರಿಗೆ ಮನೆಯ ಯಾವುದೇ ವಸ್ತು ಕೂಡ ಕೊಂಡು ಹೋಗುವುದು ಸಾಧ್ಯವಾಗಿಲ್ಲ. ಒಟ್ಟು ಹತ್ತು ಮಕ್ಕಳಿದ್ದ ಕುಟುಂಬ ಈ ಪೊಲೀಸ್ ಕಾರ್ಯಾಚರಣೆಯಿಂದ ಬೀದಿಗೆ ಬೀಳುವಂತಾಗಿತ್ತು. ಆದರೆ ಮೀರಾ ಬಾಯಿಯೇ ಮುಂದೆ ನಿಂತು ಈ ಕುಟುಂಬಕ್ಕೆ ಆಸರೆ ನೀಡಿದ್ದಾರೆ.
ಆರೋಪಿ ಹೀನಾ ಎಂಬಾಕೆ ಮೀರಾ ಬಾಯಿಯ ಬಾಡಿಗೆ ಮನೆಯಲ್ಲಿದ್ದರೂ ಆಕೆ ಅದೇ ರಾತ್ರಿ ಪರಾರಿಯಾಗಿದ್ದಳೆಂದು ಮೀರಾ ಹೇಳಿದ್ದಾರೆ. ಘಟನೆ ಸಂಬಂಧ ಯಾಸ್ಮೀನ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಯಾಸ್ಮೀನ್ ದಿನಗೂಲಿ ಕಾರ್ಮಿಕಳಾಗಿದ್ದು, ಆಕೆಯ ಮೇಲೆ ಕೊಲೆ ಯತ್ನ ಆರೋಪವನ್ನು ಹೊರಿಸಲಾಗಿದೆ. ಇತರ 17 ಮಂದಿಯ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಅವರಲ್ಲಿ 10 ಮಂದಿಯ ವಿರುದ್ಧ ಕಠಿಣ ಎನ್ಎಸ್ಎ ಹೇರಲಾಗಿದೆ ಎಂದು ವರದಿಯಾಗಿದೆ.







