ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಆರ್.ಪಿ.ಅಸುಂಡಿ, ರಮಾ ಅರವಿಂದ ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗೆ ಆಯ್ಕೆ
ಬೆಂಗಳೂರು, ಡಿ.31: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2020-21ನೇ ಸಾಲಿನಲ್ಲಿ ಕೊಡಮಾಡುವ ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗೆ ಧಾರವಾಡ ಹಿಂದೂಸ್ತಾನಿ ಸಂಗೀತಗಾರ ಆರ್.ಪಿ.ಅಸುಂಡಿ, ಹರಿಹರಪುರದ ಸುಗಮ ಸಂಗೀತಗಾರ್ತಿ ರಮಾ ಅರವಿಂದ ಹಾಗೂ ವಾರ್ಷಿಕ ಪ್ರಶಸ್ತಿಗೆ 16 ಮಂದಿ ಹಿರಿಯ ಕಲಾವಿದರು ಆಯ್ಕೆಯಾಗಿದ್ದಾರೆಂದು ಅಕಾಡೆಮಿಯ ಅಧ್ಯಕ್ಷ ಆನೂರು ಅನಂತಕೃಷ್ಣಶರ್ಮ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2020-21ನೇ ಸಾಲಿನ ಪ್ರಶಸ್ತಿಯನ್ನು ಅಕಾಡೆಮಿಯ ಸರ್ವ ಸದಸ್ಯರ ಸರ್ವಾನುಮತದ ಮೇರೆಗೆ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು 50 ಸಾವಿರ ರೂ., ವಾರ್ಷಿಕ ಪ್ರಶಸ್ತಿಯು 25 ಸಾವಿರ ರೂ.ಮೌಲ್ಯ ಒಳಗೊಂಡಿದೆ. ಫೆ.6ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಸಂಗೀತ ವಿಭಾಗದಲ್ಲಿ ಉಡುಪಿಯ ಮಧೂರು ಪಿ.ಬಾಲಸುಬ್ರಹ್ಮಣ್ಯಂ(ಹಾಡುಗಾರಿಕೆ) ಬೆಂಗಳೂರಿನ ಸುಕನ್ಯಾ ರಾಂಗೋಪಾಲ್(ಘಟಂ), ಚಿಕ್ಕಮಗಳೂರಿನ ಸುರೂಳಿ ಗಣೇಶ ಮೂರ್ತಿ(ಮೃದಂಗ), ಶ್ರೀರಂಗಪಟ್ಟಣದ ಮುರುಳಿ(ನಾದಸ್ವರ) ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿ ಧಾರವಾಡದ ಶ್ರೀಪಾದ ಹೆಗಡೆ(ಗಾಯನ), ಬೆಳಗಾವಿಯ ಪಂ.ರಾಜಪ್ರಭು ದೋತ್ರೆ(ಗಾಯನ), ಉಡುಪಿಯ ಟಿ.ರಂಗ ಪೈ ತೋನ್ಸೆ(ತಬಲಾ) ಆಯ್ಕೆಯಾಗಿದ್ದಾರೆ.
ನೃತ್ಯ ವಿಭಾಗದಲ್ಲಿ ಪುತ್ತೂರಿನ ನಯನಾ ರೈ(ನೃತ್ಯ ಗುರು), ಬೆಂಗಳೂರಿನ ಪ್ರವೀಣ್ ಕುಮಾರ್(ಭರತ ನಾಟ್ಯ), ಬೆಂಗಳೂರಿನ ಮಧು ನಟರಾಜ್(ಕಥಕ್) ಹಾಗೂ ತುಮಕೂರಿನ ಜಿ.ಗುರುಮೂರ್ತಿ(ಮೃದಂಗ) ಆಯ್ಕೆಯಾಗಿದ್ದಾರೆ.
ಸುಗಮ ಸಂಗೀತ ವಿಭಾಗದಲ್ಲಿ ಮಂಡ್ಯಾದ ಉಪಾಸನಾ ಮೋಹನ್ ಆಯ್ಕೆಯಾಗಿದ್ದಾರೆ. ಕಥಾಕೀರ್ತನ ವಿಭಾಗದಲ್ಲಿ ಬೀದರ್ ನ ವೈಕುಂಠದತ್ತ ಮಹಾರಾಜ್(ಭಾಗವತರ) ಹಾಗೂ ತುಮಕೂರಿನ ಜಿ.ಸೋಮಶೇಖರದಾಸ್ ಆಯ್ಕೆಯಾಗಿದ್ದಾರೆ.
ಗಮಕ ವಿಭಾಗದಲ್ಲಿ ಶಿವಮೊಗ್ಗದ ಎಚ್.ಎಸ್.ಗೋಪಾಲ್ ಆಯ್ಕೆಯಾಗಿದ್ದಾರೆ. ವಿಶೇಷ ಪ್ರಶಸ್ತಿಗೆ ಮೈಸೂರಿನ ಗಣೇಶ್ ಭಟ್(ಕೀ ಬೋರ್ಡ್) ಆಯ್ಕೆಯಾಗಿದ್ದಾರೆ.







