ಚಿಕ್ಕಮಗಳೂರಿನ 1893 ಗ್ರಾ.ಪಂ ಸ್ಥಾನಗಳ ಫಲಿತಾಂಶ ಪ್ರಕಟ; ಬಿಜೆಪಿ ಬೆಂಬಲಿತ ಸದಸ್ಯರ ಮೇಲುಗೈ
107 ಸ್ಥಾನಗಳಿಗೆ ಅವಿರೋಧ ಆಯ್ಕೆ

ಚಿಕ್ಕಮಗಳೂರು, ಡಿ.31: ಜಿಲ್ಲೆಯ 8 ತಾಲೂಕುಗಳ ವ್ಯಾಪ್ತಿಯಲ್ಲಿ ಡಿ.22ರಂದು 194 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆದಿದ್ದು, ಡಿ.30ರಂದು ಬುಧವಾರ ಬೆಳಗ್ಗೆ 7ಕ್ಕೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆ ರಾತ್ರಿ 10ರವರೆಗೆ ನಡೆದಿದೆ. 194 ಗ್ರಾಮ ಪಂಚಾಯತ್‍ಗಳ ಚುನಾವಣೆಯ ಮತ ಎಣಿಕೆಯಲ್ಲಿ 1893 ಸ್ಥಾನಗಳ ಫಲಿತಾಂಶ ಹೊರಬಿದ್ದಿದೆ. 107 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಬುಧವಾರ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿತ 1,063 ಸದಸ್ಯರು ಗೆಲುವು ಕಂಡಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಇನ್ನು ಕಾಂಗ್ರೆಸ್ ಬೆಂಬಲಿತ 600 ಸದಸ್ಯರು ಗೆಲುವು ಕಂಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಮುಖಂಡರು ಹೇಳಿದ್ದರೆ, ಜೆಡಿಎಸ್ ಬೆಂಬಲಿತ 199 ಸದಸ್ಯರು ಗ್ರಾಪಂ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಉಳಿದಂತೆ ಎಸ್‍ಡಿಪಿಐ, ಸಿಪಿಐ, ಬಿಎಸ್ಪಿ ಸೇರಿದಂತೆ ಇತರ 134 ಸದಸ್ಯರು ಜಿಲ್ಲೆಯಲ್ಲಿ ವಿವಿಧ ಗ್ರಾಮ ಪಂಚಾಯತ್‍ಗಳಿಗೆ ಆಯ್ಕೆಯಾಗಿದ್ದಾರೆಂದು ಹೇಳಲಾಗುತ್ತಿದೆ.
ಶೃಂಗೇರಿ ತಾಲೂಕಿನ 9 ಗ್ರಾಪಂ ವ್ಯಾಪ್ತಿಯ 86 ಸ್ಥಾನಗಳ ಪೈಕಿ ಅವಿರೋಧ ಆಯ್ಕೆಯಾದ ಸದಸ್ಯರು ಸೇರಿ 51 ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರೆ, 31 ಕಾಂಗ್ರೆಸ್ ಬೆಂಬಲಿತರು ಹಾಗೂ 4 ಇತರ ಸದಸ್ಯರು ಆಯ್ಕೆಯಾಗಿದ್ದಾರೆ. ನರಸಿಂಹರಾಜಪುರ ತಾಲೂಕಿನ 11 ಗ್ರಾಪಂ ಪೈಕಿ ಅವಿರೋಧ ಆಯ್ಕೆ ಸೇರಿದಂತೆ 126 ಸದಸ್ಯರ ಪೈಕಿ 60 ಬಿಜೆಪಿ ಬೆಂಬಲಿತ, 63 ಕಾಂಗ್ರೆಸ್ ಬೆಂಬಲಿತ, ಇತರ 3 ಸದಸ್ಯರು ಆಯ್ಕೆಯಾಗಿದ್ದಾರೆ. ಕೊಪ್ಪ ತಾಲೂಕಿನ 21 ಗ್ರಾಪಂ ಪೈಕಿ ಅವಿರೋಧ ಆಯ್ಕೆ ಸೇರಿದಂತೆ 191 ಸದಸ್ಯರ ಪೈಕಿ 114 ಬಿಜೆಪಿ ಬೆಂಬಲಿತ, 73 ಕಾಂಗ್ರೆಸ್ ಬೆಂಬಲಿತ ಹಾಗೂ ಇತರ 4 ಸದಸ್ಯರು ಆಯ್ಕೆಯಾಗಿದ್ದಾರೆಂದು ತಿಳಿದು ಬಂದಿದೆ.
ತರೀಕೆರೆ ತಾಲೂಕಿನ 25 ಗ್ರಾಪಂ ಪೈಕಿ ಅವಿರೋಧ ಆಯ್ಕೆ ಸೇರಿದಂತೆ 273 ಸದಸ್ಯರ ಪೈಕಿ 123 ಬಿಜೆಪಿ ಬೆಂಬಲಿತ, 105 ಕಾಂಗ್ರೆಸ್ ಬೆಂಬಲಿತ, 5 ಜೆಡಿಎಸ್ ಬೆಂಬಲಿತ ಹಾಗೂ 4 ಇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಅಂದಾಜಿಸಲಾಗಿದೆ. ಕಡೂರು ತಾಲೂಕಿನ 49 ಗ್ರಾಪಂ ಪೈಕಿ ಅವಿರೋಧ ಆಯ್ಕೆ ಸೇರಿದಂತೆ 494 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 252, ಕಾಂಗ್ರೆಸ್ ಬೆಂಬಲಿತ 131, ಜೆಡಿಎಸ್ ಬೆಂಬಲಿತ 102, ಇತರ 9 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಅಂದಾಜಿಸಲಾಗಿದೆ.
ಮೂಡಿಗೆರೆ ತಾಲೂಕಿನ 22 ಗ್ರಾಪಂ ಅವಿರೋಧ ಆಯ್ಕೆ ಸೇರಿದಂತೆ 248 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 116, ಕಾಂಗ್ರೆಸ್ ಬೆಂಬಲಿತ 61, ಜೆಡಿಎಸ್ ಬೆಂಬಲಿತ 50 ಹಾಗೂ ಇತರ 21 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಅಂದಾಜು ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ 33 ಗ್ರಾಪಂ ಪೈಕಿ ಅವಿರೋಧ ಆಯ್ಕೆ ಸೇರಿದಂತೆ 363 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 208, ಕಾಂಗ್ರೆಸ್ ಬೆಂಬಲಿತ 73, ಜೆಡಿಎಸ್ ಬೆಂಬಲಿತ 40, ಎಸ್‍ಡಿಪಿಐ ಬೆಂಬಲಿತ 1 ಹಾಗೂ ಇತರ 40 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಜ್ಜಂಪುರ ತಾಲೂಕಿನ 24 ಗ್ರಾಪಂ ವ್ಯಾಪ್ತಿಯಲ್ಲಿ ಅವಿರೋಧವಾಗಿ ಆಯ್ಕೆ ಸೇರಿದಂತೆ 223 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 139, ಕಾಂಗ್ರೆಸ್ ಬೆಂಬಲಿತ 69, ಜೆಡಿಎಸ್ ಬೆಂಬಲಿತ 2 ಹಾಗೂ ಇತರ 12 ಸದಸ್ಯರು ಆಯ್ಕೆಯಾಗಿದ್ದಾರೆಂದು ಆಯಾ ಪಕ್ಷಗಳ ಮುಖಂಡರು ಅಂದಾಜಿಸಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 226 ಗ್ರಾಮ ಪಂಚಾಯತ್‍ಗಳಿದ್ದು, ಈ ಪೈಕಿ 17 ಗ್ರಾಮಪಂಚಾಯತ್‍ಗಳಿಗೆ ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಾಗೂ 15 ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರದ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ನಡೆದಿಲ್ಲ. ಉಳಿದ 194 ಗ್ರಾಮ ಪಂಚಾಯತ್‍ಗಳ 1893 ಸ್ಥಾನಗಳಿಗೆ 5290 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಡಿ.22ರಂದು ಚುನಾವಣೆ ನಡೆದಿತ್ತು. ಡಿ.30ರಂದು 1893 ಸ್ಥಾನಗಳ ಫಲಿತಾಂಶ ಹೊರ ಬಿದ್ದಿದ್ದು, 107 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.







