ಜ.2ರಿಂದ ಎಲ್ಲ ರಾಜ್ಯಗಳಲ್ಲಿ ಅಣಕು ಕೋವಿಡ್ ಲಸಿಕೆ ನೀಡಿಕೆ ಆರಂಭ

ಹೊಸದಿಲ್ಲಿ,ಡಿ.31: ಎಲ್ಲ ರಾಜ್ಯಗಳಲ್ಲಿ ಅಣಕು ಕೋವಿಡ್ ಲಸಿಕೆ ನೀಡಿಕೆಯು ಜ.2ರಿಂದ ಆರಂಭಗೊಳ್ಳಲಿದೆ ಎಂದು ಸರಕಾರವು ತಿಳಿಸಿದೆ. ಇದೇ ವೇಳೆ,ಶೀಘ್ರವೇ ಲಸಿಕೆಗೆ ಅನುಮತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ದೇಶದಲ್ಲಿ ನಡೆಯುತ್ತಿರುವ ಎರಡನೇ ಅಣಕು ಲಸಿಕೆ ನೀಡಿಕೆ ಕಾರ್ಯಕ್ರಮವಾಗಿದೆ. ಮೊದಲ ಅಣಕು ಲಸಿಕೆ ನೀಡಿಕೆಯನ್ನು ನಾಲ್ಕು ರಾಜ್ಯಗಳಲ್ಲಿ ಡಿ.28 ಮತ್ತು 29ರಂದು ನಡೆಸಲಾಗಿದ್ದು, ತೃಪ್ತಿಕರ ಫಲಿತಾಂಶವನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಗುರುವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಆರೋಗ್ಯ ಸಚಿವಾಲಯವು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಪ್ರತಿ ರಾಜ್ಯದ ಆಯ್ದ ಸ್ಥಳಗಳಲ್ಲಿ ಅಣಕು ಲಸಿಕೆ ನೀಡಿಕೆಯು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಡಮ್ಮಿ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಅಸಲಿ ಲಸಿಕೆ ನೀಡಿಕೆ ಅಭಿಯಾನಕ್ಕೆ ಮುನ್ನ ಕಾರ್ಯವಿಧಾನದ ಪರೀಕ್ಷೆ ಮತ್ತು ವ್ಯವಸ್ಥೆಯಲ್ಲಿನ ಸಂಭಾವ್ಯ ಲೋಪಗಳನ್ನು ಕಂಡುಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಭಾರತವು ಕೋವಿಡ್-19 ಲಸಿಕೆ ನೀಡಿಕೆಗೆ ಸಿದ್ಧವಾಗಿದೆ ಎನ್ನುವುದನ್ನು ಎರಡು ದಿನಗಳ ಅಣಕು ಕಾರ್ಯಾಚರಣೆಯು ತೋರಿಸಿದೆ. ಎಲ್ಲ ನಾಲ್ಕು ರಾಜ್ಯಗಳಲ್ಲಿ ತೃಪ್ತಿಕರ ಫಲಿತಾಂಶ ದೊರಕಿದೆ ಎಂದು ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿತ್ತು.
ಹೊಸ ವರ್ಷದಲ್ಲಿ ಕೋವಿಡ್-19 ಲಸಿಕೆ ನೀಡಿಕೆ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆಯ ನಡುವೆಯೇ ದೇಶವ್ಯಾಪಿ ಎರಡನೇ ಅಣಕು ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಯಲಿದೆ.
ಬಹುಶಃ ಹೊಸ ವರ್ಷದಲ್ಲಿ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಔಷಧಿಗಳ ಮಹಾ ನಿಯಂತ್ರಕ ಡಾ.ವಿ.ಜಿ.ಸೋಮಾನಿ ಅವರು ಗುರುವಾರ ತಿಳಿಸಿದರು.
ಲಸಿಕೆಯ ತುರ್ತು ಬಳಕೆಗೆ ಅಧಿಕಾರ ನೀಡುವ ತಜ್ಞರ ಸಮಿತಿಯು ಶನಿವಾರ ಸಭೆ ಸೇರಲಿದ್ದು,ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ,ಭಾರತ ಬಯೊಟೆಕ್ ಮತ್ತು ಫೈಜರ್ ಸಲ್ಲಿಸಿರುವ ಅರ್ಜಿಗಳನ್ನು ಅದು ಪರಿಶೀಲಿಸುತ್ತಿದೆ.
ಈ ಪೈಕಿ ಆಕ್ಸ್‌ಫರ್ಡ್ ವಿವಿ ಮತ್ತು ಪ್ರಮುಖ ಔಷಧಿ ತಯಾರಿಕೆ ಕಂಪನಿ ಆಸ್ಟ್ರಾಝೆನೆಕಾ ಅಭಿವೃದ್ಧಿಗೊಳಿಸಿರುವ, ಸೀರಮ್ ಇನ್‌ಸ್ಟಿಟ್ಯೂಟ್ ತಯಾರಿಸಿರುವ ‘ಕೋವಿಶೀಲ್ಡ್’ ಮುಂಚೂಣಿಯಲ್ಲಿರುವಂತಿದೆ.
ಫೈಝರ್ ತನ್ನ ಪರೀಕ್ಷಾ ದತ್ತಾಂಶಗಳನ್ನು ಇನ್ನಷ್ಟೇ ಸಮಿತಿಗೆ ಸಲ್ಲಿಸಬೇಕಿದೆ. ಐಸಿಎಂಆರ್ ಸಹಭಾಗಿತ್ವದಲ್ಲಿ ‘ಕೋವ್ಯಾಕ್ಸಿನ್ ’ಅನ್ನು ಅಭಿವೃದ್ಧಿಗೊಳಿಸಿರುವ ಭಾರತ ಬಯೊಟೆಕ್ ತನ್ನ ಮೂರನೇ ಹಂತದ ಟ್ರಯಲ್ ಅನ್ನು ಪೂರ್ಣಗೊಳಿಸಿಲ್ಲ.







