12 ತಿಂಗಳ ಅವಧಿಯಲ್ಲಿ 36 ಸಾವಿರ ‘ಮೇಕ್ ಇನ್ ಇಂಡಿಯಾ’ ವೆಂಟಿಲೇಟರ್ ಗಳ ಪೂರೈಕೆ: ಕೇಂದ್ರ

ಹೊಸದಿಲ್ಲಿ,ಡಿ.31: ದೇಶದಲ್ಲಿಯ ಸರಕಾರಿ ಆಸ್ಪತ್ರೆಗಳಿಗೆ 36,433 ಸ್ವದೇಶಿ ನಿರ್ಮಿತ ವೆಂಟಿಲೇಟರ್‌ಗಳನ್ನು ಪೂರೈಸಲಾಗಿದೆ ಮತ್ತು ‘ಮೇಕ್ ಇನ್ ಇಂಡಿಯಾ’ ಅಭಿಯಾನದಡಿ ಈಗ ಈ ವೆಂಟಿಲೇಟರ್‌ಗಳ ಬೆಲೆ 2ರಿಂದ 10 ಲ.ರೂ.ವರೆಗೆ ಇದೆ ಎಂದು ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ.
ಸ್ವಾತಂತ್ರಾನಂತರ ಕೋವಿಡ್-19 ಸಾಂಕ್ರಾಮಿಕವು ಆರಂಭಗೊಳ್ಳುವವರೆಗೆ ದೇಶದಲ್ಲಿಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು ಕೇವಲ 16,000ದಷ್ಟು ವೆಂಟಿಲೇಟರ್‌ಗಳಿದ್ದವು. ಆದರೆ 12 ತಿಂಗಳಿಗೂ ಕಡಿಮೆ ಅವಧಿಯಲ್ಲಿ ಈ ಆಸ್ಪತ್ರೆಗಳಿಗೆ 36,433 ‘ಮೇಕ್ ಇನ್ ಇಂಡಿಯಾ ’ವೆಂಟಿಲೇಟರ್‌ಗಳನ್ನು ಪೂರೈಸಲಾಗಿದೆ. ವೆಂಟಿಲೇಟರ್‌ಗಳ ಮೇಲಿನ ರಫ್ತು ನಿಷೇಧವನ್ನು ಈಗ ರದ್ದುಗೊಳಿಸಲಾಗಿದ್ದು, ಸ್ವದೇಶಿ ನಿರ್ಮಿತ ವೆಂಟಿಲೇಟರ್‌ಗಳು ವಿದೇಶಗಳಿಗೆ ರಫ್ತಾಗುತ್ತಿವೆ. ಈ ವರ್ಷವು ದೇಶದಲ್ಲಿ ವೈದ್ಯಕೀಯ ಪೂರೈಕೆ ಕ್ಷೇತ್ರದಲ್ಲಿ ಭಾರೀ ಸಾಧನೆಗಳಿಗೆ ಸಾಕ್ಷಿಯಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಸಾಂಕ್ರಾಮಿಕದ ಆರಂಭದಲ್ಲಿ ಭಾರತವು ಆಮದು ಮಾಡಲಾದ ವೆಂಟಿಲೇಟರ್‌ಗಳು,ಪಿಪಿಇ ಕಿಟ್‌ಗಳು ಮತ್ತು ಎನ್-95 ಮಾಸ್ಕ್‌ಗಳನ್ನೇ ಅವಲಂಬಿಸಿತ್ತು. ವಾಸ್ತವದಲ್ಲಿ ಕೋವಿಡ್-19ರ ವಿರುದ್ಧ ಹೋರಾಟದಲ್ಲಿ ಅಗತ್ಯವಾಗಿರುವ ಈ ಉತ್ಪನ್ನಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾನದಂಡಗಳೂ ಇರಲಿಲ್ಲ ಎಂದಿರುವ ಹೇಳಿಕೆಯು,ಸಾಂಕ್ರಾಮಿಕವು ಒಡ್ಡಿದ್ದ ಸವಾಲುಗಳನ್ನು ಕೇಂದ್ರ ಸರಕಾರವು ಆರಂಭದ ಹಂತಗಳಲ್ಲಿಯೇ ಗುರುತಿಸಿತ್ತು ಮತ್ತು ದೇಶಾದ್ಯಂತ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಸಾಕಷ್ಟು ಲಭ್ಯತೆ ಮತ್ತು ಪೂರೈಕೆಯ ಬಗ್ಗೆ ಕಾಳಜಿ ವಹಿಸಿತ್ತು ಎಂದಿದೆ.
ಮಾರ್ಚ್‌ನಲ್ಲಿ ಕೆಲವೇ ಪಿಪಿಇ ಕಿಟ್‌ಗಳು ದೇಶದಲ್ಲಿ ತಯಾರಾಗುತ್ತಿದ್ದರೆ,ಇಂದು ಅದು ವಿಶ್ವದಲ್ಲಿ ಈ ಕಿಟ್‌ಗಳ ಎರಡನೇ ಅತ್ಯಂತ ದೊಡ್ಡ ತಯಾರಕ ದೇಶವಾಗಿ ಹೊರಹೊಮ್ಮಿದೆ. ಅದೀಗ ಪ್ರತಿದಿನ 10 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದು,ಅವುಗಳನ್ನು ಹಲವಾರು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದೆ.
ರಾಜ್ಯಗಳಿಗೆ ಸುಮಾರು 1.7 ಕೋಟಿ ಪಿಪಿಇ ಕಿಟ್‌ಗಳನ್ನು ಉಚಿತವಾಗಿ ಪೂರೈಸಲಾಗಿದೆ. ಕಳೆದ ಮಾರ್ಚ್‌ನಲ್ಲಿ ಸುಮಾರು ಎರಡು ಲಕ್ಷಗಳಷ್ಟಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಳಿಯ ಪಿಪಿಇ ಕಿಟ್‌ಗಳ ಮೀಸಲು ದಾಸ್ತಾನು ಈಗ 89 ಲಕ್ಷಕ್ಕೂ ಹೆಚ್ಚಾಗಿದೆ. ಒಂಭತ್ತು ತಿಂಗಳುಗಳಲ್ಲಿ ಸರಾಸರಿ ಬೆಲೆಯೂ 600 ರೂ.ಗಳಿಂದ 200 ರೂ.ಗಳಿಗೆ ಇಳಿದಿದೆ ಎಂದು ತಿಳಿಸಿರುವ ಸಚಿವಾಲಯವು, ಸಾಂಕ್ರಾಮಿಕದ ಆರಂಭದಲ್ಲಿ ಎನ್-95 ಮಾಸ್ಕ್‌ಗಳ ಕೇವಲ ಮೂರು ತಯಾರಕರಿದ್ದು,ಪ್ರತಿದಿನದ ಉತ್ಪಾದನಾ ಸಾಮರ್ಥ್ಯ ಒಂದು ಲಕ್ಷಕ್ಕೂ ಕಡಿಮೆಯಿತ್ತು. ಈಗ 3,000ಕ್ಕೂ ಅಧಿಕ ತಯಾರಕರಿದ್ದು,ಉತ್ಪಾದನಾ ಸಾಮರ್ಥ್ಯವು ದಿನಕ್ಕೆ ಎಂಟು ಲಕ್ಷ ಮಾಸ್ಕ್‌ಗಳನ್ನು ಮೀರಿದೆ. ಇವುಗಳು ವಿದೇಶಗಳಿಗೂ ರಫ್ತಾಗುತ್ತಿದ್ದು, ಸುಮಾರು ನಾಲ್ಕು ಕೋಟಿ ಎನ್-95 ಮಾಸ್ಕ್‌ಗಳನ್ನು ರಾಜ್ಯಗಳು,ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲಾಗಿದೆ ಎಂದು ಹೇಳಿದೆ.
ಮಾರ್ಚ್‌ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಬಳಿ ಸುಮಾರು ಒಂಭತ್ತು ಲಕ್ಷಗಳಷ್ಟಿದ್ದ ಎನ್-95 ಮಾಸ್ಕ್‌ಗಳ ದಾಸ್ತಾನು ಈಗ ಸುಮಾರು 1.46 ಕೋಟಿಗೆ ಹೆಚ್ಚಿದ್ದು,ಈ ಅವಧಿಯಲ್ಲಿ ಸರಾಸರಿ ಬೆಲೆಯು 40 ರೂ.ಗಳಿಂದ 12 ರೂ.ಗಳಿಗೆ ತಗ್ಗಿದೆ ಎಂದು ತಿಳಿಸಿರುವ ಅದು, ಸರಕಾರವು ಈಗಾಗಲೇ ಸುಮಾರು 83 ಕೋ.ಸಿರಿಂಜ್‌ಗಳ ಖರೀದಿಗೆ ಬೇಡಿಕೆಗಳನ್ನು ಸಲ್ಲಿಸಿದ್ದು,ಸುಮಾರು 35 ಕೋ.ಸಿರಿಂಜ್‌ಗಳ ಪೂರೈಕೆಗಾಗಿ ಬಿಡ್‌ಗಳನ್ನು ಕರೆಯಲಾಗಿದೆ. ಇವುಗಳನ್ನು ಕೋವಿಡ್-19 ಲಸಿಕೆ ನೀಡಿಕೆಗೆ ಮತ್ತು ಸಾರ್ವತ್ರಿಕ ಲಸಿಕೆ ನೀಡಿಕೆ ಯೋಜನೆಯಲ್ಲಿ ಬಳಸಲಾಗುವುದು ಎಂದಿದೆ.







