ನಿಲ್ಲದ ರೈತರ ಪ್ರತಿಭಟನೆ: ದಿಲ್ಲಿಯ ಗಡಿಗಳು ಬಂದ್

ಹೊಸದಿಲ್ಲಿ,ಡಿ.31: ನೂತನ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗಳಿಗೆ ಕಾನೂನಿನ ಖಾತರಿಯನ್ನು ಒದಗಿಸಬೇಕು ಎಂಬ ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಸರಕಾರದೊಂದಿಗಿನ ಮಾತುಕತೆಗಳು ಬಿಕ್ಕಟ್ಟಿನಲ್ಲಿಯೇ ಉಳಿದಿರುವ ಹಿನ್ನೆಲೆಯಲ್ಲಿ ಸಾವಿರಾರು ರೈತರು ಗುರುವಾರವೂ ದಿಲ್ಲಿಯ ಗಡಿ ಕೇಂದ್ರಗಳಲ್ಲಿ ತಮ್ಮ ಮುಂದುವರಿಸಿದ್ದು,ಇದರಿಂದಾಗಿ ದಿಲ್ಲಿಯ ಗಡಿಗಳನ್ನು ಮುಚ್ಚಲಾಗಿತ್ತು.
ವಿದ್ಯುತ್ ಶುಲ್ಕದಲ್ಲಿ ಏರಿಕೆ ಮತ್ತು ಕೃಷಿ ತ್ಯಾಜ್ಯಗಳನ್ನು ಸುಡುವ ಕೃಷಿಕರಿಗೆ ದಂಡನೆಗೆ ಸಂಬಂಧಿಸಿದಂತೆ ಪ್ರತಿಭಟನಾನಿರತ ರೈತರ ಕಳವಳಗಳನ್ನು ನಿವಾರಿಸಲು ಬುಧವಾರ ಸರಕಾರ ಮತ್ತು ರೈತ ಸಂಘಟನೆಗಳ ನಡುವೆ ನಡೆದ ಆರನೇ ಸುತ್ತಿನ ಮಾತುಕತೆಗಳಲ್ಲಿ ಕೊಂಚ ಮಟ್ಟಿಗೆ ಸಹಮತ ಮೂಡಿಬಂದಿದೆ.
ಮಾತುಕತೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು,ಅಜೆಂಡಾದಲ್ಲಿದ್ದ ನಾಲ್ಕು ವಿಷಯಗಳ ಪೈಕಿ ಎರಡರ ಕುರಿತು ಸಹಮತವುಂಟಾಗಿದ್ದು, ಕನಿಷ್ಠ ಶೇ.50ರಷ್ಟು ನಿರ್ಧಾರ ಹೊರಹೊಮ್ಮಿದೆ. ಉಳಿದಿರುವ ಎರಡು ವಿಷಯಗಳ ಬಗ್ಗೆ ಜ.4ರಂದು ಮಾತುಕತೆಯು ಮುಂದುವರಿಯಲಿದೆ ಎಂದು ತಿಳಿಸಿದ್ದರು.
ದಿಲ್ಲಿಯ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರತಿಭಟನಾನಿರತ ರೈತರು ಮೊಕ್ಕಾಂ ಹೂಡಿರುವ ಸಿಂಘು, ಘಾಝಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರತಿಭಟನೆಯಿಂದಾಗಿ ವಾಹನ ದಟ್ಟಣೆಯುಂಟಾಗಿದ್ದು, ವಾಹನಗಳ ಸಂಚಾರ ದಿಕ್ಕು ಬದಲಿಸುವುದು ಪೊಲೀಸರಿಗೆ ಅನಿವಾರ್ಯವಾಗಿತ್ತು. ಪ್ರತಿಭಟನೆಯಿಂದಾಗಿ ಮುಚ್ಚಲ್ಪಟ್ಟಿರುವ ಮಾರ್ಗಗಳ ಬಗ್ಗೆ ದಿಲ್ಲಿ ಸಂಚಾರ ಪೊಲೀಸರು ಟ್ವೀಟ್ ಮೂಲಕ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದು,ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದರು.







