ಗ್ರಾ.ಪಂ. ಚುನಾವಣೆ: ಅಧಿಕ ಸ್ಥಾನ ಗಳಿಸಿದ್ದು ನಾವು ಎಂದು ಹೇಳುತ್ತಿರುವ ಆಡಳಿತ, ವಿಪಕ್ಷ ನಾಯಕರು

ಬೆಂಗಳೂರು, ಡಿ. 31: ರಾಜ್ಯದ ಒಟ್ಟು 5,728 ಗ್ರಾಮ ಪಂಚಾಯತ್ ಗಳ ಒಟ್ಟು 91,339 ಸ್ಥಾನಗಳಿಗೆ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 90,729 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ರಾಜಕೀಯ ಪಕ್ಷರಹಿತ ಚುನಾವಣೆಯಾಗಿದ್ದರೂ, ‘ನಮ್ಮ ಪಕ್ಷದ ಬೆಂಬಲಿತ' ಅಭ್ಯರ್ಥಿಗಳೇ ಹೆಚ್ಚಿನ ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆಂದು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರ ನಡುವೆ ಜಟಾಪಟಿ ನಡೆದಿದೆ.‘ಶೇ.60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು, ಪಕ್ಷ ಅಭೂತಪೂರ್ವ ಸಾಧನೆ ಮಾಡಿದೆ. ಒಟ್ಟು 5,728 ಗ್ರಾಪಂಗಳ ಪೈಕಿ ಅತಿಹೆಚ್ಚು 3,800 ಗ್ರಾಪಂಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.
ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಇನ್ನೂ ಹಲವು ಜಿಲ್ಲೆಗಳಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಹೊರಬಂದಿಲ್ಲ, ಮೀಸಲಾತಿಯಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಹಂಚಿಕೆಯಾಗಿಲ್ಲ, ಆಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಪಕ್ಷ 3,800ಕ್ಕೂ ಅಧಿಕ ಪಂಚಾಯತ್ ಗಳಲ್ಲಿ ಗೆದ್ದಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ' ಎಂದು ಟೀಕಿಸಿದ್ದಾರೆ.
ಈ ಮಧ್ಯೆ ರಾಜ್ಯದ 226 ತಾಲೂಕುಗಳ ಒಟ್ಟು 5,728 ಗ್ರಾ.ಪಂ.ಗಳ 91,339 ಸ್ಥಾನಗಳ ಪೈಕಿ 90,729 ಮಂದಿ ಚುನಾಯಿತರಾಗಿದ್ದಾರೆ. 8,153 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು 610 ಸ್ಥಾನಗಳು ಖಾಲಿ ಉಳಿದಿವೆ. ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು 8,169 ಮಂದಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ 1,605 ಮಂದಿ ಗೆಲುವು ಸಾಧಿಸಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಬೆಂಗಳೂರು ನಗರ-1,885, ಬೆಂಗಳೂರು ಗ್ರಾಮಾಂತರ-1,605, ರಾಮನಗರ-1875, ಚಿತ್ರದುರ್ಗ-3420, ದಾವಣಗೆರೆ-2577, ಕೋಲಾರ-2720, ಚಿಕ್ಕಬಳ್ಳಾಪುರ-2443, ಶಿವಮೊಗ್ಗ-2607, ತುಮಕೂರು-5262, ಮೈಸೂರು-4229, ಚಿಕ್ಕಮಗಳೂರು-2002, ದಕ್ಷಿಣ ಕನ್ನಡ-3222, ಉಡುಪಿ-2353, ಕೊಡಗು-1192, ಹಾಸನ-3316, ಮಂಡ್ಯ-3792, ಚಾಮರಾಜನಗರ-2156, ಬೆಳಗಾವಿ-8169, ವಿಜಯಪುರ-3753, ಬಾಗಲಕೋಟೆ-3089, ಧಾರವಾಡ-1933, ಗದಗ-1682, ಹಾವೇರಿ-2967, ಉತ್ತರ ಕನ್ನಡ-2657, ಕಲಬುರಗಿ-4173, ಬೀದರ್-3139, ಬಳ್ಳಾರಿ-4246, ರಾಯಚೂರು-3300, ಯಾದಗಿರಿ-2269, ಕೊಪ್ಪಳ-2696 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ.
ಎಸ್ಸಿ-ಎಸ್ಟಿ, ಸಾಮಾನ್ಯ ವರ್ಗ: ಪರಿಶಿಷ್ಟ ಜಾತಿ(ಎಸ್ಸಿ) ಒಟ್ಟು 18,395, ಪರಿಶಿಷ್ಟ ಪಂಗಡ(ಎಸ್ಟಿ)-10,527, ಹಿಂದುಳಿದ ವರ್ಗ (ಎ)-12,942, ಹಿಂದುಳಿದ ವರ್ಗ(ಬಿ)-3126, ಸಾಮಾನ್ಯ-45,739 ಮಂದಿ ಆಯ್ಕೆಯಾಗಿದ್ದು, ಈ ಪೈಕಿ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಗೊಂಡಿದ್ದಾರೆ.







