ಕೊರೋನ ಲಾಕ್‍ಡೌನ್ ನಿಂದ ಹೆಚ್ಚಿದ ಬಾಲ್ಯ ವಿವಾಹ: ರಾಜ್ಯದಲ್ಲಿ 188 ಪ್ರಕರಣಗಳು ಪತ್ತೆ

ಬೆಂಗಳೂರು, ಡಿ.31: ಸರಕಾರಿ ಅಧಿಕಾರಿಗಳು ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಈ ವರ್ಷ ಕೊರೋನ ಕಾರಣಕ್ಕಾಗಿ ಮತ್ತಷ್ಟು ಹೆಚ್ಚಾಗಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ 188 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣ ಶೇ.15ರಷ್ಟು ಏರಿಕೆಯಾಗಿದೆ.
ಕೊರೋನ ಸೋಂಕು ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಿಂದಾಗಿ ಕಾರ್ಮಿಕರ ವಲಸೆ, ನಿರುದ್ಯೋಗ, ಶಾಲೆಗಳು ನಡೆಯದಿರುವುದು, ಭವಿಷ್ಯದ ಬಗ್ಗೆ ಉಂಟಾಗಿರುವ ಆತಂಕಗಳು ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯುಕ್ತ ಆರ್.ಎಸ್ ಪೆದ್ದಪ್ಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಹೇಳಿಕೆಯಂತೆ, ಪ್ರಸಕ್ತ ವರ್ಷ ಲಾಕ್ ಡೌನ್ ಅವಧಿಯಲ್ಲೇ ಅತಿಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ. ಆದರೂ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡು 2074 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ. ಇದರ ನಡುವೆಯೂ ನಡೆದ ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 108 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.
ಹಾಸನದಲ್ಲಿ 26, ಮಂಡ್ಯ 25, ಮೈಸೂರು 24 ಹಾಗೂ ಬೆಳಗಾವಿಯಲ್ಲಿ 19 ಪ್ರಕರಣಗಳು ಪತ್ತೆಯಾಗಿವೆ. ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಬಳ್ಳಾರಿಯಲ್ಲಿ ತಡೆ ಹಿಡಿಯಲಾಗಿದೆ. ಬಳ್ಳಾರಿಯಲ್ಲಿ 218, ಮೈಸೂರಿನಲ್ಲಿ 177, ಬೆಳಗಾವಿಯಲ್ಲಿ 131 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.
ಬಾಲ್ಯ ವಿವಾಹ ನಿಯಂತ್ರಿಸಲು ರಾಜ್ಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೊಳಸಲಾಗಿದೆ. ಇದಕ್ಕೆ ಪೂರಕವಾಗಿ ಬಾಲನ್ಯಾಯ ( ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2000, ಐಪಿಸಿ ಸೆಕ್ಷನ್ ಅಡಿಯಲ್ಲಿಯೂ ಬಾಲ್ಯ ವಿವಾಹ ನಿಯಂತ್ರಣಕ್ಕೆ ಅವಕಾಶ ನೀಡಲಾಗಿದೆ. ಐಪಿಸಿ ಸೆಕ್ಷನ್ 325 (2)ರ ಪ್ರಕಾರ 18 ವರ್ಷದೊಳಗಿನ ಪತ್ನಿಯ ಜೊತೆಗಿನ ದೈಹಿಕ ಸಂಪರ್ಕವೂ ಅತ್ಯಾಚಾರ ಆರೋಪದಡಿ ಶಿಕ್ಷಾರ್ಹ ಅಪರಾಧವಾಗಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ಬಾಲ್ಯ ವಿವಾಹ ನೆರವೇರಿಸುವ ಪೋಷಕರಿಗೂ 1 ರಿಂದ 2 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಅಂತೆಯೇ ಬಾಲ್ಯ ವಿವಾಹ ಅನೂರ್ಜಿತವಾಗಿರುತ್ತದೆ. ಬಾಲ್ಯ ವಿವಾಹ ತಡೆಗಟ್ಟಲು ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ಸಮಿತಿಗಳನ್ನು ರೂಪಿಸಲಾಗಿದೆ.
ಈ ಸಮಿತಿಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಯೋಜಿತರಾಗಿದ್ದು, ಬಾಲ್ಯ ವಿವಾಹ ತಡೆಗಟ್ಟಲು ನಿರಂತರ ಶ್ರಮಿಸುತ್ತಿದ್ದಾರೆ.







