ಮೊಬೈಲ್ ಆಪ್ ಮೂಲಕ ಸಾಲ ನೀಡಿ ಕಿರುಕುಳ ಆರೋಪ: ಇಬ್ಬರು ಚೀನಿಯರಿಗೆ ತೀವ್ರ ಶೋಧ
ಬೆಂಗಳೂರು, ಡಿ.30: ಮೊಬೈಲ್ ಆಪ್‍ಗಳ ಮೂಲಕ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಇಬ್ಬರು ಚೀನಾ ಪ್ರಜೆಗಳಿಗೆ ಜಾಗೃತ ದಳ ಹುಡುಕಾಟ ನಡೆಸಿದೆ.
ಜಾಗೃತ ದಳ ಬೆಂಗಳೂರು, ತೆಲಂಗಾಣ, ಪುಣೆ, ಗುರುಗ್ರಾಮ್ ಮತ್ತು ಎನ್‍ಸಿಆರ್ ಗಳಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮತ್ತು ತಡೆ ಕಾಯ್ದೆ (ಪಿಎಂಎಲ್‍ಎ) ಅಡಿ ತನಿಖೆ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ. ಕರ್ನಾಟಕದಲ್ಲಿ ಸಾಲದ ಆಪ್‍ಗಳ ವಂಚನೆ ದೂರನ್ನು ಅಪರಾಧ ತನಿಖೆ ಇಲಾಖೆ ತನಿಖೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಬೊರಯನ್ಸ್ಕಿ ಟೆಕ್ನಾಲಜಿಸ್‍ನ ಇಬ್ಬರನ್ನು ಬಂಧಿಸಲಾಗಿದೆ.
ಈ ದಾಳಿಗೆ ಒಳಪಟ್ಟಿರುವ ಕಂಪೆನಿಗಳನ್ನು ಚೀನೀಯರು ನಿಯಂತ್ರಿಸುತ್ತಿದ್ದಾರೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಎಂ.ಡಿ.ಶರತ್ ತಿಳಿಸಿದ್ದಾರೆ.
ಸಿಐಡಿ, ಮ್ಯಾಡ್ ಎಲಿಫೆಂಟ್ ಟೆಕ್ನಾಲಜಿಸ್ ಪ್ರೈ ಲಿ, ಬೊರಯನ್ಸ್ಕಿ ಟೆಕ್ನಾಲಜಿಸ್ ಪ್ರೈ ಲಿಮಿಟೆಡ್, ಪ್ರೊಫಿಟೈಸ್ ಪ್ರೈ ಲಿಮಿ ಟೆಡ್, ವಿಝ್ ಪ್ರೊ ಸೊಲ್ಯೂಷನ್ಸ್ ಪ್ರೈ ಲಿಮಿಟೆಡ್ ಮೇಲೆ ದಾಳಿ ನಡೆಸಿದೆ. ತೆಗೆದುಕೊಂಡ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವ ಮೂಲಕ ತಮಗೆ ಕಂಪೆನಿಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರುಗಳು ಬಂದ ಆಧಾರದ ಮೇಲೆ ಈ ದಾಳಿ ಮಾಡಿದೆ.
ಈ ವೇಳೆ ಅಪಾರ ಪ್ರಮಾಣದ ನಕಲಿ ಸಿಮ್ ಕಾರ್ಡುಗಳು, ನಕಲಿ ಬ್ಯಾಂಕ್ ಖಾತೆಗಳು, ಲ್ಯಾಪ್ ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಶರತ್ ತಿಳಿಸಿದ್ದಾರೆ.







