ಉತ್ತರ ಪ್ರದೇಶದ ಗ್ರಾಮವೊಂದರ ಪಂಚಾಯತ್ ಮುಖ್ಯಸ್ಥೆಯಾಗಿದ್ದಾಕೆ ಪಾಕ್ ಮಹಿಳೆ!
ಆಗ್ರಾ: ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಗ್ರಾಮ ಪಂಚಾಯತ್ ಒಂದರ ಮುಖ್ಯಸ್ಥೆಯಾಗಿದ್ದ 65 ವರ್ಷದ ಮಹಿಳೆ ಓರ್ವ ಪಾಕಿಸ್ತಾನಿ ಎಂದು ತಿಳಿದು ಅಲ್ಲಿನ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾಡಳಿತ ದಂಗಾಗಿದೆ. ಈ ಮಹಿಳೆಗೆ ಆಧಾರ್ ಕಾರ್ಡ್, ಮತದಾರರ ಗುರುತುಪತ್ರ ಮತ್ತಿತರ ದಾಖಲೆಗಳು ಹೇಗೆ ದೊರಕಿತು ಎಂಬ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆಕೆ ಭಾರತದಲ್ಲಿ ದೀರ್ಘಕಾಲಿಕ ವೀಸಾ ಪಡೆದು ನೆಲೆ ನಿಂತಿದ್ದಳು. ಆಕೆಯ ವಿರುದ್ಧ ಎಫ್‍ಐಆರ್ ಕೂಡ ದಾಖಲಾಗಿದೆ.
ಬಾನೊ ಬೇಗಂ ಎಂಬ ಹೆಸರಿನ ಈ ಮಹಿಳೆ ಪಾಕಿಸ್ತಾನದ ಕರಾಚಿಯಿಂದ 35 ವರ್ಷಗಳ ಹಿಂದೆ ಉತ್ತರ ಪ್ರದೇಶದ ಇಟಾಹ್‍ದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ನಂತರ ಸ್ಥಳೀಯ ವ್ಯಕ್ತಿ ಅಖ್ತರ್ ಅಲಿ ಎಂಬಾತನನ್ನು ವಿವಾಹವಾದ ಈಕೆ ಇಟಾಹ್ ನಲ್ಲಿಯೇ ದೀರ್ಘಕಾಲಿಕ ವೀಸಾ ಪಡೆದು ವಾಸಿಸುತ್ತಿದ್ದಳು. ಈ ನಡುವೆ ಆಕೆ ಹಲವು ಬಾರಿ ಭಾರತೀಯ ಪೌರತ್ವಕ್ಕೂ ಅರ್ಜಿ ಸಲ್ಲಿಸಿದ್ದಳು.
2015ರಲ್ಲಿ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಆಕೆ ಗುವಾಡೌ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಳು. ಈ ವರ್ಷದ ಜನವರಿ 9ರಂದು ಪಂಚಾಯತ್ ಪ್ರಧಾನ್ ಆಗಿದ್ದ ಶೆಹನಾಝ್ ಬೇಗಂ ತೀರಿಕೊಂಡ ನಂತರ ಗ್ರಾಮ ಸಮಿತಿಯ ಶಿಫಾರಸಿನಂತೆ ಬಾನೊ ಹಂಗಾಮಿ ಪಂಚಾಯತ್ ಪ್ರಧಾನ್ ಆಗಿ ಅಧಿಕಾರ ವಹಿಸಿಕೊಂಡಿದ್ದಳು.
ಆಕೆ ಪಾಕ್ ಸಂಜಾತೆಯೆಂದು ಗ್ರಾಮಸ್ಥ ಖುವೈದನ್ ಖಾನ್ ಎಂಬವರು ದೂರು ದಾಖಲಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿತ್ತು. ಬಾನೊ ನಂತರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಇಟಾಹ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಆಕೆ ವಂಚನೆ ಮೂಲಕ ಆಧಾರ್ ಕಾರ್ಡ್, ಮತದಾರರ ಗುರುತು ಪತ್ರ ಪಡೆದಿದ್ದಾಳೆಂಬ ದೂರಿನ ಕುರಿತೂ ತನಿಖೆ ನಡೆಸಲಾಗುತ್ತಿದೆ.
ಆಕೆಯನ್ನು ಪಂಚಾಯತ್ ಪ್ರಧಾನ್ ಆಗಿ ನೇಮಿಸಲು ಶಿಫಾರಸು ಮಾಡಿದ್ದ ಗ್ರಾಮ ಕಾರ್ಯದರ್ಶಿ ಧ್ಯಾನಪಾಲ್ ಸಿಂಗ್ ಎಂಬಾತನನ್ನೂ ಹುದ್ದೆಯಿಂದ ತೆಗೆದು ಹಾಕಲಾಗಿದೆ.







