ರೂಪಾಂತರಿತ ಕೊರೋನದ ಪ್ರಥಮ ಪ್ರಕರಣ ಖಚಿತಪಡಿಸಿದ ಚೀನಾ

ಬೀಜಿಂಗ್, ಡಿ.31: ಬ್ರಿಟನ್ನಲ್ಲಿ ಇತ್ತೀಚೆಗೆ ಪತ್ತೆಯಾದ ರೂಪಾಂತರಿತ ಕೊರೋನ ಸೋಂಕಿನ ಪ್ರಥಮ ಪ್ರಕರಣ ಶಾಂಘೈಯಲ್ಲಿ ದೃಢಪಟ್ಟಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಡಿಸೆಂಬರ್ 14ರಂದು ಬ್ರಿಟನ್ನಿಂದ ಆಗಮಿಸಿದ ಶಾಂಘೈ ನಿವಾಸಿ, 23 ವರ್ಷದ ಮಹಿಳೆಯಲ್ಲಿ ರೂಪಾಂತರಿತ ಕೊರೋನ ಸೋಂಕಿನ ಪ್ರಕರಣ ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕಿನ ಸೌಮ್ಯ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಿಟನ್ನಿಂದ ಬಂದಿರುವುದರಿಂದ ಮಹಿಳೆಯ ಪ್ರಯಾಣ ಇತಿಹಾಸ ಮತ್ತು ನ್ಯೂಕ್ಲೆಯಿಕ್ ಆ್ಯಸಿಡ್ ಪರೀಕ್ಷೆಯ ಫಲಿತಾಂಶದ ಅಸಹಜತೆಯ ಬಳಿಕ ಅವರ ಪರೀಕ್ಷಾ ಮಾದರಿಯ ಅನುವಂಶಿಕ ಕ್ರಮಾನುಗತಿಯನ್ನು ಆಸ್ಪತ್ರೆಯ ತಜ್ಞ ವೈದ್ಯರು ಪರಿಶೀಲನೆ ನಡೆಸಿದ್ದಾರೆ ಎಂದು ಚೀನಾದ ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.
ಬ್ರಿಟನ್ ರೂಪಾಂತರಿತ ಕೊರೋನದ ಲಕ್ಷಣ ಈ ಹಿಂದೆ ವುಹಾನ್ ಮತ್ತು ಶಾಂಘೈಯಲ್ಲಿ ಕಂಡು ಬಂದಿದ್ದ ಕೊರೋನ ಸೋಂಕಿನ ಲಕ್ಷಣಕ್ಕಿಂತ ತುಸು ಭಿನ್ನವಾಗಿದೆ.ಈಗ ಮಹಿಳೆಯ ಸಂಪರ್ಕದ ಜಾಡು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿಕೆ ತಿಳಿಸಿದೆ. ಬ್ರಿಟನ್ನಲ್ಲಿ ರೂಪಾಂತರಿತ ಕೊರೋನ ಸೋಂಕಿನ ಲಕ್ಷಣ ಪತ್ತೆಯಾದ ಹಿನ್ನೆಲೆಯಲ್ಲಿ ಬ್ರಿಟನ್ನಿಂದ ನೇರ ವಿಮಾನಯಾನವನ್ನು ಚೀನಾ ಡಿಸೆಂಬರ್ 24ರಿಂದ ಅನಿರ್ಧಿಷ್ಟಾವಧಿವರೆಗೆ ನಿಷೇಧಿಸಿದೆ.





