ಲೋನ್ ಆ್ಯಪ್ ಹಗರಣ: 21,000 ಕೋಟಿ ಮೊತ್ತದ ವಹಿವಾಟು; ಪೊಲೀಸರ ಹೇಳಿಕೆ

ಸಾಂದರ್ಭಿಕ ಚಿತ್ರ
ಹೈದರಾಬಾದ್, ಡಿ.31: ಆ್ಯಪ್ ಮೂಲಕ ತಕ್ಷಣ ಸಾಲ ನೀಡುವ ಬೃಹತ್ ವಂಚನೆ ಹಗರಣದ ಬೆನ್ನುಹತ್ತಿರುವ ಪೊಲೀಸರಿಗೆ, ಈ ಹಗರಣದಲ್ಲಿ ಚೀನೀ ಪ್ರಜೆ ಝು ವೆಯಿ ಮಾಲಕತ್ವದ 4 ಸಂಸ್ಥೆಗಳು ಸುಮಾರು 21,000 ಕೋಟಿ ರೂ. ಮೌಲ್ಯದ 1.4 ಕೋಟಿ ವಹಿವಾಟು ನಡೆಸಿರುವುದನ್ನು ಪತ್ತೆಹಚ್ಚಿದ್ದಾರೆ. ಇದರಲ್ಲಿ ಬಹುತೇಕ ವಹಿವಾಟು ಕಳೆದ 6 ತಿಂಗಳಲ್ಲಿ ನಡೆದಿದೆ. ಈ ನಾಲ್ಕು ಸಂಸ್ಥೆಗಳಿಗೆ ಸೇರಿದ ಬ್ಯಾಂಕ್ ಖಾತೆಗಳಿಗೆ ಬಟವಾಡೆ(ಹಣ ಪಾವತಿ, ಸ್ವೀಕೃತಿ ಪ್ರಕ್ರಿಯೆ) ಉಪಕ್ರಮಗಳ ಮೂಲಕ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಈ 1.4 ಕೋಟಿ ವಹಿವಾಟು ಸಾಲ ಹಂಚಿಕೆ ಮತ್ತು ಹಣ ಸಂಗ್ರಹಕ್ಕೆ ಮಾತ್ರ ಸಂಬಂಧಿಸಿದ್ದೇ ಅಥವಾ ಇತರ ಕಾರಣಕ್ಕೆ ಸಂಬಂಧಿಸಿದ ವ್ಯವಹಾರವೇ ಎಂಬುದು ತಿಳಿದುಬಂದಿಲ್ಲ. ಹವಾಲಾ ವಹಿವಾಟು ನಡೆದಿದೆಯೇ ಎಂಬುದನ್ನು ಖಾತರಿಪಡಿಸಬೇಕಾಗಿದೆ ಎಂದು ಹೈದರಾಬಾದ್ ಪೊಲೀಸ್ ಜಂಟಿ ಆಯುಕ್ತ ಅವಿನಾಶ್ ಮೊಹಾಂತಿ ಹೇಳಿದ್ದಾರೆ.
ಬಂಧನವಾದ ಸಂದರ್ಭ ತನಗೆ ಇಂಗ್ಲಿಷ್ ಭಾಷೆ ತಿಳಿದೇ ಇಲ್ಲ ಎಂದು ಹೇಳುತ್ತಿದ್ದ ವೆಯಿ, ವಿಚಾರಣೆ ಮುಂದುವರಿದಂತೆ ಹರಕುಮುರುಕು ಇಂಗ್ಲಿಷ್ನಲ್ಲಿ ಮಾತನಾಡಲು ಆರಂಭಿಸಿದ್ದಾನೆ. ಆತನಲ್ಲಿದ್ದ ಲ್ಯಾಪ್ಟಾಪ್ ಪರಿಶೀಲಿಸಿದಾಗ, ಉದ್ಯೋಗಿಗಳ ವಿವರ, ವಿವಿಧ ವ್ಯವಹಾರಕ್ಕೆ ಸಂಬಂಧಿಸಿದ ವಹಿವಾಟು ಪತ್ತೆಯಾಗಿದೆ ಎಂದವರು ಹೇಳಿದ್ದಾರೆ.
ಲಾಕ್ಡೌನ್ ಸಂದರ್ಭ ದಿಲ್ಲಿಯಲ್ಲಿದ್ದ ವೆಯಿ, ಭಾರತ-ಚೀನಾ ಮಧ್ಯೆ ನಿರಂತರ ಓಡಾಟ ನಡೆಸುತ್ತಿದ್ದ. ಆತ ಇಂಡೋನೇಶ್ಯಾಕ್ಕೆ ತೆರಳಿರುವ ಮಾಹಿತಿಯೂ ದೊರಕಿದೆ. ಲೋನ್ ಹಗರಣದ ವ್ಯವಹಾರ ಬಹುತೇಕ ಬಿಟ್ಕಾಯಿನ್ ಮೂಲಕ ನಡೆಯುತ್ತಿರುವುದೂ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







