"ನನ್ನ ಶರೀರವನ್ನು ಮಾರಾಟ ಮಾಡಿ ಸಾಲ ತೀರಿಸಿ": ಪ್ರಧಾನಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ರೈತ
ಮಧ್ಯಪ್ರದೇಶ ವಿದ್ಯುತ್ ಸರಬರಾಜು ಕಂಪೆನಿಯಿಂದ ಕಿರುಕುಳ ಆರೋಪ

ಭೋಪಾಲ್: ಮಧ್ಯಪ್ರದೇಶದ ಛತ್ತರ್‌ಪುರದ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಕಂಪೆನಿಯ ಕಿರುಕುಳ ತಾಳಲಾರದೆ 35ರ ವಯಸ್ಸಿನ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಶರಣಾಗುವ ಮೊದಲು ರೈತ ಮುನೇಂದ್ರ ರಜಪೂತ್ ಡೆತ್ ನೋಟ್ ಬರೆದಿಟ್ಟಿದ್ದು, ಇದರಲ್ಲಿ ನನ್ನ ಮೃತದೇಹವನ್ನು ಸರಕಾರಕ್ಕೆ ಹಸ್ತಾಂತರಿಸಿ ನನ್ನ ದೇಹದ ಎಲ್ಲ ಅಂಗಾಂಗಗಳನ್ನು ಮಾರಾಟ ಮಾಡಿ ಸಾಲವನ್ನು ಮರುಪಾವತಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವಿನಂತಿಸಿದ್ದಾರೆ.
ಕೊರೋನ ವೇಳೆ ಬಾಕಿ ಉಳಿಸಲಾಗಿದ್ದ ವಿದ್ಯುತ್ ಬಿಲ್ 87,000 ರೂ. ವಸೂಲಿಗಾಗಿ ವಿದ್ಯುತ್ ಸರಬರಾಜು ಕಂಪೆನಿ(ಡಿಸ್ಕಾಂ) ರಜಪೂತ್‌ಗೆ ಸೇರಿರುವ ಹಿಟ್ಟಿನ ಗಿರಣಿ ಹಾಗೂ ಬೈಕ್ ಮುಟ್ಟುಗೋಲು ಹಾಕಿಕೊಂಡಿತ್ತು. ಎಂದು ಮೃತ ರೈತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ದೊಡ್ಡ ರಾಜಕಾರಣಿಗಳು ಹಾಗೂ ಉದ್ಯಮಿಗಳು ಹಗರಣಗಳನ್ನು ನಡೆಸಿದ್ದರೂ ಸರಕಾರಿ ಉದ್ಯೋಗಿಗಳು ಅವರ ಮೇಲೆ ಕ್ರಮ ಕೈಗೊಳ್ಳವುದಿಲ್ಲ.ಅವರು ಸಾಲ ಪಡೆದರೆ ಹಣ ಮರು ಪಾವತಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ ಅಥವಾ ಸಾಲ ಮನ್ನಾ ಮಾಡಲಾಗುತ್ತದೆ. ಆದರೆ, ಬಡವನೊಬ್ಬ ಸಣ್ಣ ಮೊತ್ತದ ಸಾಲ ಪಡೆದರೆ ಸಾಲ ಮರುಪಾವತಿಸಲು ಏಕೆ ಸಾಧ್ಯವಾಗಿಲ್ಲ ಎಂದು ಕೂಡ ಕೇಳುವುದಿಲ್ಲ. ಅದರ ಬದಲಿಗೆ ಎಲ್ಲರೆದುರು ಅವರಿಗೆ ಅವಮಾನ ಮಾಡಲಾಗುತ್ತದೆ ಎಂದು ರೈತ ತನ್ನ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ರಜಪೂತ್ ಬೆಳೆದಿದ್ದ ಬೆಳೆ ಹಾಳಾಗಿತ್ತು. ಇದರಿಂದಾಗಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಲಿಲ್ಲ. ಬಳಿಕ ಡಿಸ್ಕಾಂ 87,000 ರೂ. ವಸೂಲಿ ಮಾಡಲು ನೋಟಿಸ್ ನೀಡಿದೆ ಎಂದು ರೈತನ ಕುಟುಂಬ ತಿಳಿಸಿದೆ.
ಮೃತ ರೈತ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







