ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕೇಂದ್ರ ಗೃಹ ಸಚಿವ ಬೂಟಾ ಸಿಂಗ್ ನಿಧನ

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬೂಟಾ ಸಿಂಗ್ ಶನಿವಾರ ಬೆಳಗ್ಗೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೆದುಳಿನಲ್ಲಿ ರಕ್ತಶ್ರಾವವಾದ ಬಳಿಕ ಕಳೆದ ವರ್ಷದ ಅಕ್ಟೋಬರ್‌ನಿಂದ ಸಿಂಗ್ ಕೋಮಾಸ್ಥಿತಿಯಲ್ಲಿದ್ದರು.
ಪುತ್ರ ಅರವಿಂದ್ ಸಿಂಗ್ ಲವ್ಲಿ ಸಿಧು ಫೇಸ್ ಬುಕ್ ಮುಖಾಂತರ ತಂದೆಯ ನಿಧನದ ಸುದ್ದಿಯನ್ನು ಪ್ರಕಟಿಸಿದರು.
ಇಂದು ಬೆಳಗ್ಗೆ ನನ್ನ ತಂದೆ ಬೂಟಾ ಸಿಂಗ್ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಿಂದಿಯಲ್ಲಿ ಅರವಿಂದ್ ಬರೆದಿದ್ದಾರೆ.
1960ರಲ್ಲಿ ಕಾಂಗ್ರೆಸ್‌ಗೆ ಸೇರುವ ಮೊದಲು ಶಿರೋಮಣಿ ಅಕಾಲಿ ದಳದಲ್ಲಿದ್ದ ಬೂಟಾ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಕುಲದೀಪ್ ಬಿಶ್ನೋಯ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೂಟಾ ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.
ಪಂಜಾಬ್‌ನ ಜಲಂದರ್‌ನಲ್ಲಿ 1934ರಲ್ಲಿ ಜನಿಸಿರುವ ಬೂಟಾ ಸಿಂಗ್ ಅವರು ಜವಾಹರಲಾಲ್ ನೆಹರೂ ನಾಯಕತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಗೆ ಆತ್ಮೀಯರಾಗಿದ್ದರು. 1962ರಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದ ಸಿಂಗ್ ಅವರು 1986ರಿಂದ 89ರ ತನಕ ರಾಜೀವ್ ಗಾಂಧಿ ಸರಕಾರದಲ್ಲಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೃಷಿ, ರೈಲ್ವೆ, ವಾಣಿಜ್ಯ ಹಾಗೂ ಕ್ರೀಡಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.







