"ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕಿರುಕುಳ ನೀಡಿ ವಾಮಮಾರ್ಗ ಅನುಸರಿಸಿತ್ತು"
ಹರೀಶ್ ಕುಮಾರ್ ಆರೋಪ

ಮಂಗಳೂರು, ಜ.2: ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಬಿಜೆಪಿಯು ಜಿಲ್ಲೆಯಲ್ಲಿ ಕಾಂಗ್ರೆಸ ಬೆಂಬಲಿತ ಅಭ್ಯರ್ಥಿಗಳಿಗೆ ಕಿರುಕುಳ ನೀಡಿ, ಗೆಲುವಿಗಾಗಿ ವಾಮಮಾರ್ಗ ಅನುಸರಿಸಿತ್ತು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನೇರವಾಗಿ ಚುನಾವಣೆ ಎದುರಿಸಲು ಸಾಧ್ಯವಾಗದ ಬಿಜೆಪಿಯು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬೆದರಿಕೆಯೊಡ್ಡುವುದು, ಹೆದರಿಸುವುದು, ಪಕ್ಷ ಗುರುತಿಸಿದ ಅಭ್ಯರ್ಥಿಗಳನ್ನು, ಅವರ ಸಂಬಂಧಿಕರ ಮೂಲಕ ನಾಮಪತ್ರ ಹಾಕದಂತೆ ತಡೆದಿರುವುದು, ಆಮಿಷವೊಡ್ಡುವುದು ಸೇರಿದಂತೆ ಹಣ ಹಾಗೂ ತೋಳ್ಬಲವನ್ನು ಪ್ರದರ್ಶಿಸಿದೆ. ಚುನಾವಣೆಯಲ್ಲಿ ಬಿಜೆಪಿಯ ದಬ್ಬಾಳಿಕೆಯನ್ನು ಖಂಡಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಪಕ್ಷದ ಬೆಂಬಲದಿಂದ ಸ್ಪರ್ಧಿಸಿದ್ದ 3,200 ಅಭ್ಯರ್ಥಿಗಳಲ್ಲಿ 1,011 ಮಂದಿ ಗೆಲುವು ಸಾಧಿಸಿದ್ದು, 49 ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಸ್ಪಷ್ಟ ಬಹುಮತ ಪಡೆದಿದ್ದರೆ, ಕೆಲವು ಗ್ರಾಪಂಗಳಲ್ಲಿ ಅಸ್ಪಷ್ಟ ಬಹುಮತ ಪಡೆದಿದೆ. ಬಂಟ್ವಾಳ, ಮೂಡುಬಿದಿರೆ, ಉಳ್ಳಾಲದ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಉತ್ತಮ ಬೆಂಬಲ ದೊರಕಿದ್ದು, ಬೆಳ್ತಂಗಡಿ, ಸುಳ್ಯದಲ್ಲಿ ಹಿಂದಿನ ಅವಧಿಗಿಂತ ಹಿಂದೆ ಬಿದ್ದಿದ್ದೇವೆ ಎಂದರು.
ಶಾಲಾ ಕಾಲೇಜು ಆರಂಭವಾದರೂ ಪಠ್ಯಕ್ರಮ ನಿಗದಿಪಡಿಸಿಲ್ಲ: ಖಾದರ್
ಸರಕಾರ ಶಾಲಾ ಕಾಲೇಜುಗಳನ್ನು ಆರಂಭಿಸಿದೆಯಾದರೂ ಸ್ಪಷ್ಟ ನಿಯಮಗಳನ್ನು ಜಾರಿಗೊಳಿಸಿಲ್ಲ. ಆಫ್‌ಲೈನ್ ತರಗತಿಗಳ ಜತೆಗೆ ಆನ್‌ಲೈನ್ ಕೂಡಾ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲಪಡುವಂತಾಗಿದೆ. ಮಾತ್ರವಲ್ಲದೆ, ಸರಕಾರ ಇನ್ನೂ ಪಠ್ಯಕ್ರಮವನ್ನು ನಿಗದಿಪಡಿಸಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ದೂರಿದರು.
ಶಾಲೆ ಕಾಲೇಜು ಆರಂಭಿಸಿ ಶಿಕ್ಷಕರು ಆಫ್‌ಲೈನ್ ತರಗತಿ ನಡೆಸುವಾಗ ಆನ್‌ಲೈನ್ ಮೂಲಕವೂ ಪಾಠಗಳನ್ನು ಮಾಡುವುದು ಹೇಗೆ?, ಪಠ್ಯ ಕ್ರಮ ನಿಗದಿಯಾಗದೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದಾದರೂ ಹೇಗೆ ಸರಕಾರ ಒಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಯು.ಟಿ.ಖಾದರ್ ಆರೋಪಿಸಿದ್ದಾರೆ.








