ಸಂಪುಟ ವಿಸ್ತರಣೆ ಹಿನ್ನೆಲೆ: ಜಂಟಿ ಅಧಿವೇಶನ ಮುಂದೂಡಿಕೆ ಸಾಧ್ಯತೆ

ಬೆಂಗಳೂರು, ಜ. 2: ಸಂಕ್ರಾತಿಯ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ವರ್ಷದ ಮೊದಲ ವಿಧಾನ ಮಂಡಲ ಜಂಟಿ ಅಧಿವೇಶನ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಜ.18ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ನಡೆಸುವ ಸಂಬಂಧ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ಜ.15ಮತ್ತು 16ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದು, ಇದೇ ವೇಳೆ ಸಂಪುಟ ವಿಸ್ತರಣೆ ಅಥವಾ ಪುನರಚನೆ ಸಂಬಂಧ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ. ಆ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮುಂದೂಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ ಮೊದಲನೆ ವಾರದಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಪುಟ ಸಹೋದ್ಯೋಗಿಗಳ ಉದ್ದೇಶಿಸಿದ್ದಾರೆ ಎಂದು ಗೊತ್ತಾಗಿದೆ. ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆಯಾದರೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೊನೆಕ್ಷಣದಲ್ಲಿ ಕೈ ತಪ್ಪಿದರೆ ಅಧಿವೇಶನದ ವೇಳೆ ಸರಕಾರ ಮುಜುಗರಕ್ಕೆ ಸಿಲುಕುವ ಸಾಧ್ಯತೆಗಳಿವೆ. ಅಲ್ಲದೆ, ಇದೇ ವಿಚಾರಕ್ಕೆ ಸರಕಾರವನ್ನು ಪ್ರತಿಪಕ್ಷಗಳು ತರಾಟೆ ತೆಗೆದುಕೊಳ್ಳಲು ಅಸ್ತ್ರವೊಂದು ಸಿಕ್ಕಂತೆ ಆಗುತ್ತದೆ.
ಸಚಿವ ಸಂಪುಟದಲ್ಲಿ ಕೆಲವೇ ಸ್ಥಾನಗಳಷ್ಟೇ ಖಾಲಿ ಇದ್ದು, ಆ ಸ್ಥಾನಗಳಿಗೆ 15ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಯಾರನ್ನೇ ಸಂಪುಟಕ್ಕೆ ಪರಿಗಣಿಸಿದರೂ ಅಥವಾ ಕೈಬಿಟ್ಟರೂ ಸರಕಾರಕ್ಕೆ ತೀವ್ರ ತಲೆನೋವು ಆಗುವುದಂತೂ ನಿಶ್ಚಿತ. ಇವೆಲ್ಲವನ್ನೂ ಲೆಕ್ಕಾಚಾರ ಹಾಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸದ್ಯಕ್ಕೆ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಜಂಟಿ ಅಧಿವೇಶನ ನಡೆಸಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ.







