ಕೊರೋನಗೆ ಬಲಿಯಾದ 26 ಅಂಗನವಾಡಿ ನೌಕರರಿಗೆ ಸರಕಾರ ಪರಿಹಾರ ಕೊಟ್ಟಿಲ್ಲ: ವರಲಕ್ಷ್ಮೀ

ಉಡುಪಿ, ಜ.2: ಕೊರೋನ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಅಂಗನವಾಡಿ ನೌಕರರ ಪೈಕಿ 113 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇವರಲ್ಲಿ ಉಡುಪಿ ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು 27 ಅಂಗನ ವಾಡಿ ನೌಕರರು ಬಲಿಯಾಗಿದ್ದಾರೆ. ಮಾ.24ರ ಬಳಿಕ ಕೆಲಸದ ಒತ್ತಡಕ್ಕೆ ಒಳಗಾಗಿ 35 ಮಂದಿ ಕೆಲಸದ ಒತ್ತಡದಿಂದ ನಂತರ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ-ಬಿಸಿಯೂಟ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾದಿಂದ ಮೃತಪಟ್ಟ ನೌಕರರಲ್ಲಿ ಒಬ್ಬರಿಗೆ ಮಾತ್ರ 30ಲಕ್ಷ ರೂ. ಸಂಪೂರ್ಣ ಪರಿಹಾರ ದೊರೆತಿದೆ. ಉಳಿದ 26 ಮಂದಿಗೆ ಪರಿಹಾರ ಹಣ ಬಿಡುಗಡೆ ಆಗಿಲ್ಲ. ಆದುದರಿಂದ ಸರಕಾರ ಕೂಡಲೇ ಎಲ್ಲ ಕುಟುಂಬ ಗಳಿಗೆ ಪರಿಹಾರ ಹಣ ನೀಡಬೇಕು ಎಂದು ಅವರು ಆಗ್ರಹಿಸಿದರು.
ಉಡುಪಿ ಜಿಲ್ಲೆಯ 1192 ಅಂಗವಾಡಿ ಕೇಂದ್ರ 2384 ಮಂದಿ ನೌಕರರಿದ್ದು, ಇವರಲ್ಲಿ 15 ನೌಕರರು ಕೊರೋನಾ ಸೋಂಕಿಗೆ ಒಳಗಾಗಿ, ಒಬ್ಬರು ಮೃತಪಟ್ಟಿ ದ್ದರು. ಆದರೆ ಮೃತರ ಕುಟುಂಬಕ್ಕೂ ಸರಕಾರದಿಂದ ಈವರೆಗೆ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದು ಅವರು ದೂರಿದರು.
ಮಾರ್ಚ್‌ನಲ್ಲಿ ಹೋರಾಟ: ಅಂಗನವಾಡಿಗಳಲ್ಲಿ ಕೊಡುವ ಕೋಳಿ ಮೊಟ್ಟೆ ಖರೀದಿಗೆ ಸರಕಾರ ಮುಂಚಿತವಾಗಿಯೇ ಹಣವನ್ನು ನೌಕರರಿಗೆ ನೀಡ ಬೇಕು. ಹಾಗಾದರೆ ಮಾತ್ರ ನಾವು ಮಕ್ಕಳಿಗೆ ಮೊಟ್ಟೆಯನ್ನು ನೀಡುತ್ತೇವೆ. ಅದು ಬಿಟ್ಟು ನಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ಖರೀದಿಸುವುದಿಲ್ಲ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಏಳು ತಿಂಗಳಿನಿಂದ ಮೊಟ್ಟೆ ಹಣ ನೌಕರರಿಗೆ ನೀಡಿಲ್ಲ ಎಂದು ಅವರು ದೂರಿದರು.
ನೂತನ ಶಿಕ್ಷಣ ನೀತಿಯಂತೆ ಈಗಾಗಲೇ ಮಾನವ ಸಂಪನ್ಮೂಲ ಇಲಾಖೆ ಕೇಂದ್ರೀಕೃತ ಅಡುಗೆಗೆ ಮನೆಗಳನ್ನು ತೆರೆಯಬೇಕೆಂದು ಹೊರಡಿಸಿ ರುವ ಸುತ್ತೋಲೆ ಜಾರಿಯಾದರೆ ಸಾವಿರಾರು ಬಿಸಿಯೂಟ ಮಹಿಳಾ ಕಾರ್ಯ ಕರ್ತರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಆದುದರಿಂದ ಸುತ್ತೋಲೆಯನ್ನು ಜಾರಿ ಮಾಡಬಾರದು. ಸೆಪ್ಟೆಂಬರ್‌ನಿಂದ ಬಿಸಿಯೂಟ ನೌಕರರಿಗೆ ಕೊಡ ಬೇಕಾದ ವೇತನ ಕೊಟ್ಟಿಲ್ಲ. ಕೂಡಲೇ ಬಾಕಿ ವೇತನವನ್ನು ಬಿಡುಗಡೆ ಮಾಡ ಬೇಕೆಂದು ಎಂದು ಅವರು ಒತ್ತಾಯಿಸಿದರು.
ಅಂಗನವಾಡಿ ನೌಕರರಿಗೆ ಕೊರೋನ ಪರಿಹಾರ, ವಿಶೇಷ ಭತ್ಯೆ ನಿವೃತ್ತಿ ಯಾದವರಿಗೆ ಪಿಂಚಣಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮೇಲ್ದರ್ಜೆ ಗೇರಿಸದ ಸರಕಾರ, ನೌಕರರಿಗೆ ಅಗತ್ಯ ಇಲ್ಲದ 65 ಸಾವಿರ ಮೊಬೈಲ್‌ಗಳನ್ನು ವಿತರಿಸಿದೆ ಎಂದು ಟೀಕಿಸಿದ ಅವರು, ಈ ಎಲ್ಲ ವಿಚಾರವಾಗಿ ಮಾರ್ಚ್ ತಿಂಗಳಲ್ಲಿ ನಡೆಯುವ ಬಜೆಟ್ ಅಧಿ ವೇಶದ ಸಂದರ್ಭ ಬೃಹತ್ ಬೆಂಗಳೂರು ಚಲೋ ಹೋರಾಟವನ್ನು ಹಮ್ಮಿಕೊಳ್ಳ ಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಭಾರತಿ, ಕಾರ್ಯದರ್ಶಿ ಸುಶೀಲಾ ನಾಡ, ಸಿ.ಐ.ಟಿ.ಯು. ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿ.ಐ.ಟಿ.ಯು. ತಾಲೂಕು ಕಾರ್ಯದರ್ಶಿ ಕವಿರಾಜ್ ಉಪಸ್ಥಿತರಿದ್ದರು.
ಅಂಗನವಾಡಿ ಕೇಂದ್ರಗಳು ನಿಷ್ಪ್ರಯೋಜಕ
ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಚರ್ಚೆ ಮಾಡದೆ ನೂತನ ಶಿಕ್ಷಣ ನೀತಿಯನ್ನು ಸರಕಾರ ಜಾರಿ ಮಾಡಿದೆ. ಈ ನೀತಿ ಮೂರು ವರ್ಷ ಮೇಲ್ಪಟ್ಟ ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಯಡಿ ತರಲು ಪ್ರಸ್ತಾಪಿಸಿದೆ. ಈಗಾಗಲೇ ಕರ್ನಾಟಕ ದಲ್ಲಿ ತೆರೆಯಲಾದ ಪಬ್ಲಿಕ್ ಶಾಲೆಗಳಲ್ಲಿ 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಲ್‌ಕೆಜಿ, ಯುಕೆಜಿಯನ್ನು ಪ್ರಾರಂಭಿಸಲಾಗಿದೆ. ಇದರಿಂದ 1500 ಅಂಗನವಾಡಿಗಳಲ್ಲಿ ಮಕ್ಕಳು ಕಡಿಮೆಯಾಗಿದೆ. ಈ ರೀತಿಯ ಪ್ರಯೋಗ ಹೊಸ ನೀತಿಯಲ್ಲಿ ಮುಂದುವರೆಸಿದರೆ ಅಂಗನವಾಡಿ ಕೇಂದ್ರಗಳು ನಿಷ್ಪ್ರಯೋಜಕವಾಗುತ್ತದೆ ಎಂದು ಎಸ್.ವರಲಕ್ಷ್ಮೀ ದೂರಿದರು.
ಐಸಿಡಿಎಸ್‌ನ ಮೂಲ ಕೆಲಸ ಬೇರೆ ಇಲಾಖೆಗೆ ವರ್ಗಾವಣೆ ಮಾಡಿದರೆ ಅದರ ಮೂಲತತ್ವಗಳಿಗೆ ತಿಲಾಂಜಲಿ ಇಟ್ಟಂತಾಗುತ್ತದೆ. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಈಗಿರುವ ಅಂಗನವಾಡಿ ಕಾರ್ಯಕರ್ತೆಯ ರಿಗೆ ವಿಶೇಷ ತರಬೇತಿಗಳನ್ನು ನೀಡಿದರೆ ಎಲ್ಲಾ ವರ್ಗದ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಪೂರ್ವ-ಪ್ರಾಥಮಿಕ ಶಿಕ್ಷಣ ನೀಡಬಹುದು ಎಂದು ಅವರು ತಿಳಿಸಿದರು.







