2020: ಬಡವರು ಕಷ್ಟಪಟ್ಟರು; ಶ್ರೀಮಂತರ ಸಂಪತ್ತು ಹೆಚ್ಚಿತು...
ಅತಿ ಶ್ರೀಮಂತರಾದ ಜೆಫ್ ಬೆಝೋಸ್, ಎಲಾನ್ ಮಸ್ಕ್

ವಾಶಿಂಗ್ಟನ್, ಜ. 2: 2020ರಲ್ಲಿ ಕೊರೋನ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಕೋಟ್ಯಂತರ ಕುಟುಂಬಗಳು ಅಸಹನೀಯ ಸಂಕಷ್ಟಕ್ಕೆ ಒಳಗಾಗಿದ್ದವು. ಕಂಪೆನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದವು. ಲಾಕ್‌ಡೌನ್‌ನಿಂದಾಗಿ ಜನರು ಕೆಲಸ ಬಿಟ್ಟು ಮನೆಯಲ್ಲೇ ಉಳಿಯುವಂತಾಯಿತು. ಈ ಅವಧಿಯಲ್ಲಿ ಜನರಿಗೆ ಸರಿಯಾಗಿ ತಿನ್ನಲೂ ಸಿಗಲಿಲ್ಲ.
ಆದರೆ, ಜಗತ್ತಿನ ಸಿರಿವಂತರಿಗೆ ಆ ವರ್ಷ ಸಂಪೂರ್ಣ ಭಿನ್ನವಾಗಿತ್ತು. ಸಾಂಕ್ರಾಮಿಕ ಆರಂಭವಾದಂದಿನಿಂದ ಬಿಲಿಯಾಧೀಶರು ತಮ್ಮ ಸಂಪತ್ತಿಗೆ ಇನ್ನೂ ಒಂದು ಟ್ರಿಲಿಯನ್ ಡಾಲರ್ (ಸುಮಾರು 73 ಲಕ್ಷ ಕೋಟಿ ರೂಪಾಯಿ) ಸೇರಿಸಿಕೊಂಡರು. ಈ ಪೈಕಿ ಸುಮಾರು ಐದನೇ ಒಂದು ಭಾಗದಷ್ಟು ಸಂಪತ್ತು ಜಗತ್ತಿನ ಎರಡು ಕುಬೇರರ ತಿಜೋರಿ ಸೇರಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಅವರೆಂದರೆ, ಅಮೆಝಾನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಬೆಝೋಸ್ (ಅವರು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಮಾಲೀಕರೂ ಹೌದು) ಮತ್ತು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಕಂಪೆನಿಗಳ ಒಡೆಯರಾಗಿರುವ ಎಲಾನ್ ಮಸ್ಕ್.
‘ಬ್ಲೂಮ್‌ಬರ್ಗ್’ ಮಾಡಿರುವ ಅಂದಾಜಿನಂತೆ, ಜನವರಿಯಿಂದೀಚೆಗೆ ಮಸ್ಕ್ ತನ್ನ ಸಂಪತ್ತನ್ನು ಐದು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಅಂದರೆ, ಅವರು ತನ್ನ ಸಂಪತ್ತಿಗೆ 132 ಬಿಲಿಯ ಡಾಲರ್ (ಸುಮಾರು 9.64 ಲಕ್ಷ ಕೋಟಿ ರೂಪಾಯಿ)ನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡಿದ್ದಾರೆ ಹಾಗೂ ಆ ಮೂಲಕ 159 ಬಿಲಿಯ ಡಾಲರ್ (ಸುಮಾರು 11.62 ಲಕ್ಷ ಕೋಟಿ ರೂಪಾಯಿ) ಸಂಪತ್ತಿನೊಂದಿಗೆ ಜಗತ್ತಿನ ಎರಡನೇ ಅತಿ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.
ಇದೇ ಅವಧಿಯಲ್ಲಿ ಬೆರೆಸ್‌ರ ಸಂಪತ್ತಿನಲ್ಲಿ ಸುಮಾರು 70 ಬಿಲಿಯ ಡಾಲರ್ (ಸುಮಾರು 5.12 ಲಕ್ಷ ಕೋಟಿ ರೂಪಾಯಿ) ಹೆಚ್ಚಳವಾಗಿದೆ. ಇದರೊಂದಿಗೆ ಸುಮಾರು 186 ಬಿಲಿಯ ಡಾಲರ್ (ಸುಮಾರು 13.60 ಲಕ್ಷ ಕೋಟಿ ರೂಪಾಯಿ) ಒಟ್ಟು ಸಂಪತ್ತಿನೊಂದಿಗೆ ಅವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದರು ಎಂದು ವರದಿ ಹೇಳಿದೆ.







