ಕಸ್ತೂರಿರಂಗನ್ ವರದಿಯ ಬಾಧಕ ಅಂಶಗಳ ಕೈಬಿಡಿ: ಬಾಕಿಸಂ

ಕುಂದಾಪುರ, ಜ.2: ಗ್ರಾಪಂ ಚುನಾವಣೆಗಳೆಲ್ಲಾ ಮುಗಿದಿರುವುದರಿಂದ ಇನ್ನು ರಾಜಕೀಯ ಕೆಸರೆರಚಾಟ ಬಿಟ್ಟು, ಜನಜೀವನಕ್ಕೆ ಮಾರಕವಾದ ಅಂಶಗಳ ಬಗ್ಗೆ ಅಗತ್ಯ ಕಾನೂನಾತ್ಮಕ ತಿದ್ದುಪಡಿ ತಂದು ಹಸಿರು ಪೀಠದ ಮುಂದೆ ರಾಜ್ಯ ಸರಕಾರ ತನ್ನ ಅಹವಾಲನ್ನು ಮಂಡಿಸಲಿ. ಕೇರಳ ಸರಕಾರದಂತೆ ಪ್ರತೀ ಗ್ರಾಮಗಳ ವ್ಯಾಪ್ತಿಯಲ್ಲಿ ನಕ್ಷೆ ಆಧಾರಿತವಾಗಿ ಸಮೀಕ್ಷೆ ನಡೆಸಿ, ಕೈಬಿಡಬೇಕಾದ ರೈತರ ಮನೆ, ಕೃಷಿಭೂಮಿಗಳನ್ನು ಗುರುತಿಸಿ ಕೇಂದ್ರ ಸರಕಾರಕ್ಕೆ ವರದಿ ನೀಡಲಿ ಎಂದು ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿಯ ಸಭೆಯಲ್ಲಿ ಸರಕಾರ ವನ್ನು ಆಗ್ರಹಿಸಲಾಯಿತು.
ಈಗಾಗಲೇ ಜಾರಿಗೊಂಡಿರುವ ಅಭಯಾರಣ್ಯಗಳಿಗೆ ಹೊಂದಿಕೊಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಘೋಷಿಸಲಾದ ಪರಿಸರ ಸೂಕ್ಷ್ಮವಲಯಗಳ ಬಗ್ಗೆ ಜನರಿಗೆ ಸತ್ಯವನ್ನು ಹೇಳಲಿ ಎಂದು ಭಾಕಿಸಂ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತಾಲೂಕು ಸಮಿತಿ ಮಾಸಿಕ ಸಭೆಯಲ್ಲಿ ಒತ್ತಾಯಿಸಲಾಯಿತು.
ಕಸ್ತೂರಿರಂಗನ್ ವರದಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಸರಕಾರ ಹಾಗೂ ಸಚಿವರು ಚುನಾವಣೆ ಸಂದರ್ಭದಲ್ಲಿ ಹೇಳುತ್ತಲೆ ಬಂದಿದ್ದಾರೆ. ಒಂದು ಕಡೆ ಹಸಿರು ಪೀಠ ಕೇಂದ್ರ ಸರಕಾರದ ಮೇಲೆ ಕೂಡಲೇ ಕಸ್ತೂರಿರಂಗನ್ ವರದಿ ಜಾರಿಗೆ ತರುವಂತೆ ಒತ್ತಡ ಹೇರುತ್ತಲೆ ಇದೆ. ಇನ್ನೊಂದು ಕಡೆ ಅಭಯಾರಣ್ಯ ಹಾಗೂ ಸಂರಕ್ಷಿತ ಅರಣ್ಯಗಳ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯದ ಹೆಸರಿನಲ್ಲಿ ಪ್ರೊ.ಮಾಧವ ಗಾಡ್ಗಿಲ್ ವರದಿ ಅನುಷ್ಠಾನಕ್ಕೆ ಬಂದಾಗಿದೆ ಎಂದು ಭಾಕಿಸಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಸಭೆಯಲ್ಲಿ ಮಾತ ನಾಡುತ್ತಾ ಹೇಳಿದರು.
ಪರಿಸರ ಸೂಕ್ಷ್ಮವಲಯ ಘೋಷಣೆ: 2017ರಲ್ಲಿ ಮುಕಾಂಬಿಕಾ ಅಭಯಾರಣ್ಯವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ್ದು, ಅದಕ್ಕೆ ಹೊಂದಿಕೊಂಡ ಕುಂದಾಪುರ ತಾಲೂಕಿನ 25 ಗ್ರಾಮಗಳಲ್ಲಿ 12,508 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಸೇರಿಸ ಲಾಗಿದೆ. ಅದೇ ರೀತಿ ಇತ್ತೀಚೆಗೆ ಪ್ರಕಟಗೊಂಡ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ 12 ಗ್ರಾಮಗಳ 5,545.7 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ ಎಂದವರು ಬಹಿರಂಗ ಪಡಿಸಿದರು.
ಈ ಬಗ್ಗೆ ಜನಪ್ರತಿನಿಧಿಗಳಿಗಾಗಲೀ, ಸರಕಾರಕ್ಕಾಗಲೀ ಅಥವಾ ಅಧಿಕಾರಿ ಗಳಿಗಾಗಲಿ ಮಾಹಿತಿ ಇದ್ದಂತೆ ತೋರುವುದಿಲ್ಲ. ಆ ಗ್ರಾಮಗಳ ವ್ಯಾಪ್ತಿಯಲ್ಲಿ ಯಾವ ಯಾವ ಸರ್ವೇ ನಂಬರ್‌ಗಳು ಒಳಗೊಂಡಿವೆ. ಅದರಲ್ಲಿ ರೈತರ ಮನೆ, ಕೃಷಿೂಮಿ ಎಲ್ಲವೂ ಒಳಗೊಂಡಿದ್ದು, ಅದನ್ನು ಕೈಬಿಡುವ ಬಗ್ಗೆ ಯಾರು ಮಾತನಾಡುತ್ತಿಲ್ಲ. ಈಗಾಗಲೇ ಇರುವ ಡೀಮ್ಡ್ ಪಾರೆಸ್ಟ್ ಸಮಸ್ಯೆಯ ಜೊತೆಗೆ ಇನ್ನೊಂದು ಸಮಸ್ಯೆಯನ್ನು ಜನರು ನಿತ್ಯ ಅನುಭವಿಸುವಂತಾಗಿದೆ ಎಂದು ಸತ್ಯನಾರಾಯಣ ಉಡುಪ ವಿಷಾಧಿಸಿದರು.
ಮೆಸ್ಕಾಂ ಪ್ರತಿ ಯುನಿಟ್‌ಗೆ ಒಂದು ರೂಪಾಯಿ ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಅದಕ್ಕೆ ಬಾರತೀಯ ಕಿಸಾನ್ ಸಂಘದ ವತಿಯಿಂದ ಆಕ್ಷೇಪ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರದ ಹಣ ಇನ್ನೂ ಅನೇಕ ರೈತರಿಗೆ ಪಾವತಿಯಾಗಿಲ್ಲ. ಸರಕಾರದ ಯೋಜನೆಗಳು ಉತ್ತಮವಾಗಿದ್ದರೂ ಅದರ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಿಗಳು ನಿರುತ್ಸಾಹ ತೋರುತ್ತಿದ್ದಾರೆ ಎಂದು ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ ಅಭಿಪ್ರಾಯಪಟ್ಟರು.
ತಾಲೂಕು ಸಮಿತಿಯ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಐತಾಳ್, ನಾಗಪ್ಪ ಶೆಟ್ಟಿ, ಅನಂತಪದ್ಮನಾಭ ಉಡುಪ, ವೆಂಕಟೇಶ್ ರಾವ್, ಚೆನ್ನಕೇಶವ ಕಾರಂತ, ನಾಗಯ್ಯ ಶೆಟ್ಟಿ, ಮಂಜುನಾಥ ಹೆಬ್ಬಾರ್, ಸುಧಾಕರ ನಾಯಕ್, ನಾರಾಯಣ ಶೆಟ್ಟಿ, ಸತ್ಯನಾರಾಯಣ ಅಡಿಗ, ನಾಗರಾಜ ಉಡುಪ, ಜಗದೀಶ ರಾವ್, ತೇಜಪ್ಪ ಶೆಟ್ಟಿ, ಕುಶಲ ಶೆಟ್ಟಿ, ಬೋಜರಾಜ ಶೆಟ್ಟಿ, ಸುಬ್ರಹ್ಮಣ್ಯ ಉಡುಪ, ಗಣೇಶ, ಚಂದ್ರಶೇಖರ ಭಟ್, ನಾರಾಯಣ ಖಾರ್ವಿ, ಚಂದ್ರಶೇಖರ ಉಡುಪ ಮತ್ತು ಗ್ರಾಮ ಸಮಿತಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಯಡಿಯಾಳ ವಂದಿಸಿದರು.







