ಹೊಸ ಶಿಕ್ಷಣ ನೀತಿಯಿಂದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ: ಮಾಹೆ ಕುಲಪತಿ ಲೆ.ಜ.ಡಾ.ವೆಂಕಟೇಶ್

ಉಡುಪಿ, ಜ.2: ಕೇಂದ್ರ ಸರಕಾರ ಅನುಷ್ಠಾನಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿಯಿಂದ ಉನ್ನತ ಶಿಕ್ಷಣ ಕ್ಷೇತ್ರದ ಪುನಸ್ಸಂಘಟನೆಯಾಗಲಿದ್ದು, ಇದರಿಂದ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದು ಮಣಿಪಾಲ ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಎಂಜಿಎಂ ಕಾಲೇಜು ಉಡುಪಿ ಹಾಗೂ ಕಾಲೇಜಿನ ಐಕ್ಯುಎಸಿ ಆಶ್ರಯದಲ್ಲಿ ಇಂದು ನಡೆದ ‘ಹೊಸ ಶಿಕ್ಷಣ ನೀತಿಯ ಅನುಷ್ಠಾನ ಹಾಗೂ ರಚನಾ ತ್ಮಕ ದೃಷ್ಟಿಕೋನ’ ಎಂಬ ವಿಷಯದ ಕುರಿತ ಒಂದು ದಿನದ ಸಂವಾದ ಕಾರ್ಯಕ್ರಮ ವನ್ನು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
2030ರ ವೇಳೆಗೆ ದೇಶದ ಶೇ.100ರಷ್ಟು ಶಿಕ್ಷಣ ಹಾಗೂ 2035ಕ್ಕೆ ದೇಶದ ಶೇ.50ರಷ್ಟು ಮಂದಿಗೆ ಉನ್ನತ ಶಿಕ್ಷಣ ಹೊಸ ಶಿಕ್ಷಣ ನೀತಿಯ ಪ್ರಮುಖ ಗುರಿಗಳು. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಶೋಧನೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಡಾ.ವೆಂಕಟೇಶ್ ನುಡಿದರು.
ಹೊಸ ಶಿಕ್ಷಣ ನೀತಿಯ ಸಮಗ್ರ ಅನುಷ್ಠಾನದಿಂದ ನಮ್ಮ ಶಿಕ್ಷಣದ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಸಾಧ್ಯವಾಗಲಿದೆ. ಒಂದರ್ಥದಲ್ಲಿ ಶಿಕ್ಷಣವನ್ನು ಜಾಗತೀಕರಣಗೊಳಿಸಲಾಗಿದೆ. ಹೊರದೇಶಗಳಲ್ಲಿ ನಮ್ಮ ಕ್ಯಾಂಪಸ್‌ಗಳನ್ನು ತೆರೆಯಲು ಹಾಗೂ ಹೊರದೇಶಗಳ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ದೇಶದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲು ಇದರಿಂದ ಸಾಧ್ಯವಾಗಲಿದೆ ಎಂದರು.
ಎನ್‌ಇಪಿಯಲ್ಲಿ ಶಿಕ್ಷಣವನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ. ಪದವಿ ಶಿಕ್ಷಣವನ್ನು 3 ಅಥವಾ 4 ವರ್ಷಕ್ಕೆ, ಉನ್ನತ ಶಿಕ್ಷಣವನ್ನು ಒಂದು ವರ್ಷಕ್ಕೆ, ಪ್ರತಿಭಾವಂತ ವಿದ್ಯಾರ್ಥಿ ನಾಲ್ಕು ವರ್ಷಗಳ ಪದವಿ ಬಳಿಕ ನೇರವಾಗಿ ಪಿಎಚ್‌ಡಿಗೆ ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಶೋಧನೆ ಯನ್ನು ಉದ್ಯೋಗದ ಸಾಲಿನಲ್ಲಿ ಸೇರಿಸಲಾಗಿದೆ. ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಆಯ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಲೆ.ಜ. ಡಾ.ವೆಂಕಟೇಶ್ ತಿಳಿಸಿದರು.
ಶಿಖರೋಪನ್ಯಾಸ: ‘ಭವಿಷ್ಯದ ಶಿಕ್ಷಣ’ ಎಂಬ ವಿಷಯದ ಕುರಿತು ಶಿಖರೋಪನ್ಯಾಸ ನೀಡಿದ ಧಾರವಾಡದ ಕರ್ನಾಟಕ ವಿವಿಯ ನಿವೃತ್ತ ಕುಲಪತಿ ಡಾ. ಎಸ್.ಕೆ.ಸೈದಾಪುರ್, ಸ್ಥಳೀಯ ಹಾಗೂ ಜಾಗತಿಕ ಸ್ಪರ್ಧೆಯನ್ನು ಎದುರಿಸಿ ನಿಲ್ಲುವಂತೆ ಶಿಕ್ಷಣ ರಂಗವನ್ನು ಪುನರ್‌ರೂಪಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶವಾಗಿದೆ ಎಂದರು.
ದೇಶದಲ್ಲಿ ಡಾ.ಎಸ್.ರಾಧಾಕೃಷ್ಣನ್‌ರಿಂದ ಹಿಡಿದು ಡಾ.ಕೆ.ಕಸ್ತೂರಿರಂಗನ್ ವರೆಗೆ ಈವರೆಗೆ 20 ಶಿಕ್ಷಣ ಆಯೋಗ, ಸಮಿತಿಗಳನ್ನು ರಚಿಸಲಾ ಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಯ ಕುರಿತು ಈ ಸಮಿತಿಗಳು ವರದಿಗಳನ್ನೂ ನೀಡಿವೆ. ಶಿಕ್ಷಣದ ಮೂಲಕ ಸಮಾಜದ ಸುಧಾರಣೆಯ ಇವುಗಳ ಮುಖ್ಯ ಉದ್ದೇಶವಾಗಿದೆ ಎಂದವರು ವಿವರಿಸಿದರು.
ಶಿಕ್ಷಣದಿಂದಾಗಿ ಜಗತ್ತಿನಲ್ಲಿ ಈವರೆಗೆ ಒಟ್ಟು ನಾಲ್ಕು ಕೈಗಾರಿಕಾ ಕ್ರಾಂತಿಗಳು ನಡೆದಿದೆ. 1780ರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ಟೆಕ್ಸ್‌ಟೈಲ್ ಕ್ರಾಂತಿ, 1870ರಲ್ಲಿ ಅಮೆರಿಕದಲ್ಲಿ ವಿದ್ಯುಚ್ಛಕ್ತಿಯಿಂದಾಗಿ ಆದ ಕೈಗಾರಿಕಾ ಕ್ರಾಂತಿ, 2019ರಲ್ಲಾದ ಅಟೋಮೇಟಿವ್ ಕ್ರಾಂತಿ-ಇಲೆಕ್ಟ್ರಾನಿಕ್ಸ್ ಕ್ಷೇತ್ರದ ಮುನ್ನಡೆ ಹಾಗೂ 2020ರಲ್ಲಾದ ಡಿಜಿಟಲೈಝೇಷನ್, ಸೈಬರ್ ಕ್ರಾಂತಿ ನಡೆದಿವೆ. ಇವುಗಳಿಗೆ ಶಿಕ್ಷಣವೇ ಕಾರಣವೆಂಬುದನ್ನು ಮರೆಯಬಾರದು ಎಂದರು.
ಹೊಸ ಶಿಕ್ಷಣ ನೀತಿ ಎಷ್ಟೇ ಚೆನ್ನಾಗಿದ್ದರೂ, ಅನುಷ್ಠಾನ ಸರಿಯಾಗಿ ನಡೆಯ ದಿದ್ದರೆ ಅದರ ಉದ್ದೇಶ ಈಡೇರಲಾರದು. ಹೊಸ ಶಿಕ್ಷಣ ನೀತಿಯು ಈಗಿನ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಯನ್ನು ಬಯಸುತ್ತದೆ. ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮೂಲಸೌಕರ್ಯ, ಪಠ್ಯಕ್ರಮದಲ್ಲಿ ಇನ್ನಷ್ಟು ಪ್ರಗತಿಯನ್ನು ಅಪೇಕ್ಷಿಸುತ್ತದೆ. ಸೃಜನಶೀಲತೆ ಹಾಗೂ ಆವಿಷ್ಕಾರ ಗುಣವನ್ನು ಬಯಸುತ್ತದೆ ಎಂದರು.
ವೇದಿಕೆಯಲ್ಲಿ ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಎ. ಉಪಸ್ಥಿತರಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ಎಸ್.ನಾಯ್ಕಾ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಉಷಾರಾಣಿ ಸುವರ್ಣ ಹಾಗೂ ಸರಸ್ವತಿ ಟಿ. ಅತಿಥಿಗಳನ್ನು ಪರಿಚಯಿಸಿದರು. ಐಕ್ಯೂಎಸಿ ಸಂಯೋಜಕ ಅರುಣಕುಮಾರ್ ಎ. ವಂದಿಸಿದರು.









