ಶಿಕ್ಷಣ ನೀತಿಯ ಅನುಷ್ಠಾನ ಅಂಶ ಮುಖ್ಯ: ಡಾ.ಮೋಹನ ಆಳ್ವ
ಉಡುಪಿ, ಜ.2: ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಒಳ್ಳೆಯ ಅಂಶಗಳು ಮೊದಲೂ ಇದ್ದವು. ಆದರೆ ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ನಾವು ವಿಫಲ ರಾಗಿದ್ದೇವೆ. ವೇದಿಕೆಗಳಲ್ಲಿ ಅವು ಕೇಳುತಿದ್ದವೇ ಹೊರತು, ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಲೇ ಇಲ್ಲ ಎಂದು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.
ಎಂಜಿಎಂ ಕಾಲೇಜು ಉಡುಪಿ ಹಾಗೂ ಕಾಲೇಜಿನ ಐಕ್ಯುಎಸಿ ಆಶ್ರಯದಲ್ಲಿ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಹೊಸ ಶಿಕ್ಷಣ ನೀತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಸಂಸ್ಕೃತಿ ಹಾಗೂ ಕ್ರೀಡೆ’ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಸ್ಥಳೀಯ ಸಂಸ್ಕೃತಿ, ಪರಂಪರೆ ಹಾಗೂ ಕ್ರೀಡೆ ನಮ್ಮ ಶಿಕ್ಷಣ ನೀತಿಯಲ್ಲಿ ಸರಿಯಾದ ಸ್ಥಾನ ಸಿಕ್ಕಿಲ್ಲ. ಈಗಲೂ ಇವುಗಳಿಗೆ ಸಮರ್ಥ ಶಿಕ್ಷಕರಿಗೆ ಕೊರತೆ ಇದೆ. ಮೂಲಭೂತ ಸೌಕರ್ಯಗಳೂ ಇಲ್ಲ. ಅದೇ ರೀತಿ ಒಳ್ಳೆಯ ಪ್ರೇಕ್ಷಕರು, ಎಲ್ಲವನ್ನೂ ತಿಳಿದುಕೊಂಡ ಸಂಘಟಕನೂ ಇದಕ್ಕೆ ಬೇಕಾಗಿದೆ ಎಂದರು.
ಕ್ರೀಡೆ ಹಾಗೂ ಸಂಸ್ಕೃತಿ ಎಲ್ಲವನ್ನೂ ಪ್ರಾಥಮಿಕ ಶಾಲಾ ಹಂತದಲ್ಲೇ ನಾವು ಮಕ್ಕಳಿಗೆ ಕಲಿಸಬೇಕು. ಸೌಂದರ್ಯ ಪ್ರಜ್ಞೆ, ಕ್ರೀಡಾ ಮನೋಭಾವ ಬೆಳೆಯ ಬೇಕಿದ್ದರೆ ಮಕ್ಕಳಿಗೆ ಅವುಗಳನ್ನು ಸರಿಯಾಗಿ ಕಲಿಸಬೇಕು. ಅಲ್ಲದೇ ಶಾಸ್ತ್ರೀಯ ಕಲೆಗೆ ಇತಿಮಿತಿಗಳನ್ನು ಹೇರಬಾರದು ಎಂದವರು ಸಲಹೆ ನೀಡಿದರು.
ನಮ್ಮಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟ, ಕ್ರೀಡೋತ್ಸವ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಟಾಚಾರಕ್ಕೆಂಬಂತೆ ನಡೆಸಲಾಗುತ್ತಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರೋತ್ಸಾಹಿ ಸಬೇಕು ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ನಮ್ಮಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟ, ಕ್ರೀಡೋತ್ಸವ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಟಾಚಾರಕ್ಕೆಂಬಂತೆ ನಡೆಸಲಾಗುತ್ತಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರೋತ್ಸಾಹಿ ಸಬೇಕು ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು. ಮಂಗಳೂರಿನ ವಂ. ಮೆಲ್ವಿನ್ ಪಿಂಟೋ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಘದ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಕುಮಟದ ಕೊಂಕಣ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲೀಧರ ಪ್ರಭು, ಮಂಗಳೂರು ಯೆನಪೋಯ ಇನ್‌ಸ್ಟಿಟ್ಯೂಟ್‌ನ ಡಿಡಿ ಡಾ.ಅರುಣ ಭಾಗ್ವತ್ ಅಭಿಪ್ರಾಯ ಮಂಡಿಸಿದರು. ಡಾ.ಆರ್.ಜಿ.ಹೆಗಡೆ ಸಂವಾದವನ್ನು ನಡೆಸಿಕೊಟ್ಟರು.







