ರಾಜ್ಯದ ಐದು ಜಿಲ್ಲೆಗಳ 16 ಆರೋಗ್ಯ ಕೇಂದ್ರಗಳಲ್ಲಿ ಕೊರೋನ ಲಸಿಕೆ ಡ್ರೈರನ್ ಯಶಸ್ವಿ

ಬೆಂಗಳೂರು, ಜ.2: ಕೊರೋನ ಸೋಂಕು ಸಂಬಂಧ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಐದು ಜಿಲ್ಲೆಗಳ 16 ಆರೋಗ್ಯ ಕೇಂದ್ರಗಳಲ್ಲಿ ಕೊರೋನ ಲಸಿಕೆ ಡ್ರೈರನ್(ಲಸಿಕೆ ವಿತರಣೆ ಅಣಕು) ಪ್ರಕ್ರಿಯೆ ಯಶಸ್ವಿಯಾಗಿ ಸಾಗಿದೆ.
ಶನಿವಾರ ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ ಹಾಗೂ ಮೈಸೂರಿನಲ್ಲಿ ಏಕಕಾಲಕ್ಕೆ ಲಸಿಕೆ ವಿತರಣೆ ಅಣಕು ಮಾಡಲಾಯಿತು.
ತಲಾ ಒಂದು ಪ್ರಾಥಮಿಕ ಆರೋಗ್ಯ ಕೆಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಅಥವಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅರ್ಧ ದಿನದ ಮಟ್ಟಿಗೆ ಡ್ರೈರನ್‍ಗೆ ಮೀಸಲಿಡಲಾಗಿತ್ತು.
ಹೇಗೆ ಕಾರ್ಯ?: ಕೇಂದ್ರ ಒಂದಕ್ಕೆ ಆರೋಗ್ಯ ಇಲಾಖೆ ನಿಗದಿ ಪಡಿಸಿರುವ 25 ಫಲಾನುಭವಿಗಳು ತಮಗೆ ಬಂದಿರುವ ಮೊಬೈಲ್ ಸಂದೇಶವನ್ನು ತೋರಿಸಿ ಕೊಠಡಿ ಪ್ರವೇಶಿಸಿದರು. ಪ್ರತಿ ಕೇಂದ್ರಕ್ಕೆ ಐದು ಸಿಬ್ಬಂದಿ ಇದ್ದು, ಫಲಾನುಭವಿಗಳ ಮಾಹಿತಿ ಪಟ್ಟಿ, ದಾಖಲಾತಿ ಪರಿಶೀಲನೆಗೆ ಅಗತ್ಯ ತಾಂತ್ರಿಕ ಸಾಧನಗಳು, ಲಸಿಕೆ ಸಂಗ್ರಹ ಶೀತಲೀಕರಣ ಪಟ್ಟಿಗೆಗಳು (ಐಎಲ್‍ಆರ್) ಕೇಂದ್ರದಲ್ಲಿವೆ.
ಈ ಡ್ರೈರನ್‍ನಲ್ಲಿ ಚುಚ್ಚು ಮದ್ದು (ಲಸಿಕೆ) ನೀಡುವುದೊಂದನ್ನು ಬಿಟ್ಟು ಬಾಕಿ ಎಲ್ಲಾ ಚಟುವಟಿಕೆಗಳು ನಡೆಯಲಿವೆ. ಒಟ್ಟಾರೆ 16 ಆರೋಗ್ಯ ಕೇಂದ್ರದಲ್ಲಿ 100 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ, 375 ಫಲನಾಭವಿಗಳು (ಆರೋಗ್ಯ ಇಲಾಖೆ ನಿಯೋಜಿಸಿರುವ ಕಾರ್ಯಕರ್ತರು) ಭಾಗವಹಿಸಿದ್ದರು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೇಗಿದೆ ಲಸಿಕೆ ಡ್ರೈರನ್ ಕೇಂದ್ರ ?
ಆರೋಗ್ಯ ಕೇಂದ್ರದಲ್ಲಿ ನಾಲ್ಕು ಕೊಠಡಿಗಳಿದ್ದು, ಒಂದನೇ ಕೊಠಡಿಯಲ್ಲಿ ಫಲಾನುಭವಿಗಳ ಮಾಹಿತಿ ಸಂಗ್ರಹ, ದಾಖಲೆ ಪರಿಶೀಲನೆ ವಿಚಾರಣೆ ನಡೆಯುತ್ತಿದೆ. ಎರಡನೆಯ ಕೊಠಡಿಯಲ್ಲಿ ಆರೋಗ್ಯ ತಪಾಸಣೆ ಆ ನಂತರ ಲಸಿಕೆ ಪಡೆಯಲು ಸರತಿ ಟೋಕನ್ ನೀಡಲಾಗುತ್ತಿದೆ.
ಅದೇರೀತಿ, ಮೂರನೆಯ ಕೊಠಡಿಯು ಲಸಿಕೆ, ಚುಚ್ಚು ಮದ್ದಿನ ಕೊಠಡಿಯಾಗಿದ್ದು, ಅಣಕು ಆಗಿರುವುದರಿಂದ ಲಸಿಕೆ ನೀಡುತ್ತಿಲ್ಲ. ನಾಲ್ಕನೆ ಕೊಠಡಿಯು ವಿಶ್ರಾಂತಿಗೆ, ಅವಲೋಕನ ಮಾಡಲಾಗುತ್ತದೆ. ಇಲ್ಲಿ ಲಸಿಕೆ ಪಡೆದ ಬಳಿಕೆ ಯಾವುದೇ ಅಡ್ಡ ಪರಿಣಾಮ ಕಾಣಿಸಿಕೊಂಡರೆ (ತಲೆ ಸುತ್ತು, ಮೈ ತುರಿಕೆ) ಅವರಿಗೆ ತುರ್ತು ಚಿಕಿತ್ಸೆಗೆಂದು ಮೀಸಲಿಡಲಾಗಿದೆ.
ರಾಜಧಾನಿಯಲ್ಲೂ ಚಾಲನೆ
ಪಾಲಿಕೆ ವ್ಯಾಪ್ತಿಯ ದಕ್ಷಿಣ ವಲಯದ ವಿದ್ಯಾಪೀಠದಲ್ಲಿರುವ ಸಾರ್ವಜನಿಕ ಆರೋಗ್ಯಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯದಲ್ಲಿರುವ ಸಾರ್ವಜನಿಕ ಆರೋಗ್ಯಕೇಂದ್ರ ಹಾಗೂ ಬೆಂಗಳೂರು ನಗರ ಗ್ರಾಮಾಂತರ ಆನೇಕಲ್ ಭಾಗದ ಹರ್ಗಾದೆಯಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ತಾಲೀಮು ನಡೆಯಿತು.
ಇಲ್ಲಿನ ಪ್ರತಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 25 ಮಂದಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದ್ದು, 3 ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ 75 ಕಾರ್ಯಕರ್ತರಿಗೆ ಎರಡು ಗಂಟೆಗಳ ಕಾಲ ಲಸಿಕೆ ತಾಲೀಮು ನಡೆಸಲಾಯಿತು.







