ಬೈಕಂಪಾಡಿ: ಆ್ಯಂಟನಿ ವೇಸ್ಟ್ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಮಂಗಳೂರು, ಜ.2: ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೈಕಂಪಾಡಿಯ ಆ್ಯಂಟನಿ ವೇಸ್ಟ್ ಕಚೇರಿಯ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು. ಕಾರ್ಮಿಕರ ಈ ಮುಷ್ಕರದಿಂದ ಶನಿವಾರ ಮಧ್ಯಾಹ್ನ ದವರೆಗೆ ನಗರದಲ್ಲಿ ಕಸ ವಿಲೇವಾರಿ ಸ್ಥಗಿತಗೊಂಡಿತ್ತು. ಬಳಿಕ ನಡೆದ ಮಾತುಕತೆ ಫಲಫ್ರದವಾದ ಕಾರಣ ಮಧ್ಯಾಹ್ನದ ಬಳಿಕ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯು ಎಂದಿನಂತೆ ಮುಂದುವರಿಯಿತು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತು ಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಮತ್ತಿತರ ಅಧಿಕಾರಿಗಳು ಕಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಮಧ್ಯಾಹ್ನದ ಬಳಿಕ ಕೆಲವು ಕಾರ್ಮಿಕರು ಕರ್ತವ್ಯಕ್ಕೆ ಹಾಜರಾದರು. ರವಿವಾರದಿಂದ ನಗರದಲ್ಲಿ ಪೂರ್ಣ ಪ್ರಮಾಣದ ಕಸ ವಿಲೇವಾರಿ ನಡೆಯಲಿದೆ ಎಂದು ಕಾರ್ಮಿಕ ಮುಖಂಡ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.
ಪಾಲಿಕೆ ನಿಯಮದಂತೆ ಶುಕ್ರವಾರ ಒಣ ಕಸ ವಿಲೇವಾರಿ ಮತ್ತು ಉಳಿದ ಎಲ್ಲಾ ದಿನ ಹಸಿ ಕಸ ವಿಲೇವಾರಿ ನಡೆಯುತ್ತದೆ. ಆದರೆ ಶನಿವಾರ ಬೆಳಗ್ಗೆ ಪೌರ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದಾಗಿ ನಗರದಲ್ಲಿನ ರಸ್ತೆ ಬದಿಯಲ್ಲಿಯೇ ಅಲ್ಲಲ್ಲಿ ಕಸ ಬಿದ್ದಿರುವುದು ಕಂಡು ಬಂದಿತ್ತು. ಶುಕ್ರವಾರ ಒಣ ಕಸ ವಿಲೇವಾರಿ ಮಾತ್ರವಿದ್ದ ಕಾರಣ ಎರಡು ದಿನಗಳ ಹಸಿ ಕಸ ಸಂಗ್ರಹ ಬಾಕಿಯಾಗಿತ್ತು.
ನಗರದ ಸೆಂಟ್ರಲ್ ಮಾರುಕಟ್ಟೆ, ಉರ್ವಸ್ಟೋರ್, ಬಿಜೈ ಮಾರುಕಟ್ಟೆ ಪ್ರದೇಶ, ಕೊಟ್ಟಾರ, ಕುದ್ರೋಳಿ ಸಹಿತ ಹಲವು ಕಡೆಗಳಲ್ಲಿನ ಅಂಗಡಿ ಮುಂದೆ ಮಧ್ಯಾಹ್ನದ ವರೆಗೆ ಕಸ ಇಡಲಾಗಿತ್ತು. ಶನಿವಾರ ಮಧ್ಯಾಹ್ನದ ಬಳಿಕ ಕೆಲವೊಂದು ಕಡೆಗಳಲ್ಲಿ ಕಸ ವಿಲೇವಾರಿ ಆರಂಭಗೊಂಡರೂ ಕಾರ್ಮಿಕರ ಕೊರತೆಯಿಂದಾಗಿ ಎಲ್ಲಾ ಕಡೆಗಳ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಲಿಲ್ಲ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಾರ್ಮಿಕರು ಶನಿವಾರ ಬೈಕಂಪಾಡಿಯಲ್ಲಿ ಆ್ಯಂಟನಿ ವೇಸ್ಟ್ ಕಂಪೆನಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದೆ. ಆ ವೇಳೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತರು ಜ.4ರೊಳಗೆ ಬೋನಸ್ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶನಿವಾರ ಸಂಜೆ ವೇಳೆಯೇ ಬಹುತೇಕ ಕಾರ್ಮಿಕರಿಗೆ ಬೋನಸ್ ಬಂದಿದೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.
ಮಂಗಳೂರು ಸಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಮಾತನಾಡಿ ಪಾಲಿಕೆ ಆಯುಕ್ತರು ಮತ್ತು ಉಪ ಆಯುಕ್ತರು ಸೇರಿ ದಂತೆ ವಿವಿಧ ಅಧಿಕಾರಿಗಳು ನಮ್ಮನ್ನು ಭೇಟಿ ಮಾಡಿದ್ದು, ಅವರಲ್ಲಿ ವಿವಿಧ ಬೇಡಿಕೆಗಳನ್ನು ಹೇಳಿದ್ದೇವೆ. ಜ.10ರೊಳಗೆ ಸಂಬಳ ನೀಡುವ ಭರವಸೆ ನೀಡಲಾಗುತ್ತದೆ. ನಮ್ಮ ಉಳಿದ ಬೇಡಿಕೆಗಳ ಈಡೇರಿಕೆಗೆ ಮಾತುಕತೆ ನಡೆಸಲು ಸೋಮವಾರದಂದು ಪಾಲಿಕೆಗೆ ಆಗಮಿಸುವಂತೆ ತಿಳಿಸಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಕಾರ್ಮಿಕರ ಇನ್ನಿತರ ಬೇಡಿಕೆಯಂತೆ ದಿನದ ಕೆಲಸದ ಅವಧಿ ಎಂಟು ಗಂಟೆಗೆ ನಿಗದಿಪಡಿಸಬೇಕು. ಹೆಚ್ಚುವರಿ ಕೆಲಸ ಮಾಡಿದರೆ ಸರಕಾರದ ನಿಯಮದ ಪ್ರಕಾರ ಓಟಿ ನೀಡಬೇಕು. ಕಾರ್ಮಿಕರ ವಿರುದ್ಧ ದಬ್ಬಾಳಿಕೆ ಮಾಡುವ, ಹಣಕಾಸು ದುರ್ಬಳಕೆ ಮಾಡುವ ಸೂಪರ್‌ವೈಸರ್ ಅವರ ಮೇಲೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಇಎಲ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಭವಿಷ್ಯ ನಿಧಿ ಮತ್ತು ಇಎಸ್‌ಐಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಕಾರ್ಮಿಕರಿಗೆ ನೀಡಬೇಕು. ವೇತನದ ಪೂರ್ಣ ವಿವರ (ಪೇಸ್ಲಿಪ್ ಅನ್ನು) ಎಲ್ಲರಿಗೂ ನೀಡಬೇಕು. ವೇತನದ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಜಾರಿಗೆ ತರಬೇಕು. ವಾಹನಗಳ ದುರಸ್ತಿಯನ್ನು ಅತಿ ಶೀಘ್ರದಲ್ಲಿ ಮಾಡಬೇಕು. ಪ್ರತಿ ತಿಂಗಳು ಕೆಲಸಗಾರರು ಹಾಗೂ ಆಡಳಿತ ವಿಭಾಗದ ಸಭೆಯನ್ನು ನಡೆಸಬೇಕು. ಈ ಸಭೆಯಲ್ಲಿ ಕುಂದುಕೊರತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ ಎಂದು ನಾರಾಯಣ ಶೆಟ್ಟಿ ತಿಳಿಸಿದ್ದಾರೆ.







