ಚೀನಾದ ಆಕ್ರಮಣಶೀಲತೆ ಖಂಡಿಸುವ ಅಮೆರಿಕದ ಮಸೂದೆ ಅಂಗೀಕಾರ

ವಾಶಿಂಗ್ಟನ್, ಜ. 2: ಭಾರತದ ವಿರುದ್ಧದ ಚೀನಾದ ಆಕ್ರಮಣಶೀಲತೆಯನ್ನು ಖಂಡಿಸುವ ಅಮೆರಿಕದ ಮಸೂದೆಯು ಶುಕ್ರವಾರ ಕಾನೂನಾಗಿದೆ.
ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತದ ವಿರುದ್ಧದ ಚೀನಾದ ಆಕ್ರಮಣಶೀಲತೆಯನ್ನು ಖಂಡಿಸುವ ಈ ಮಸೂದೆಯು ಅಮೆರಿಕದ 740 ಬಿಲಿಯ ಡಾಲರ್ ರಕ್ಷಣಾ ನೀತಿ ಮಸೂದೆಯ ಭಾಗವಾಗಿತ್ತು. ರಕ್ಷಣಾ ನೀತಿ ಮಸೂದೆ ಅಂಗೀಕಾರಗೊಳ್ಳದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಟೊ ಚಲಾಯಿಸಿದರಾದರೂ ಅಮೆರಿಕದ ಸಂಸತ್ತು ಕಾಂಗ್ರೆಸ್ ಅದನ್ನು ತಳ್ಳಿಹಾಕಿತು ಹಾಗೂ ರಕ್ಷಣಾ ನೀತಿ ಮಸೂದೆಯನ್ನು ಅಂಗೀಕರಿಸಿತು. ಅದರೊಂದಿಗೆ ಭಾರತದ ಪರವಾಗಿರುವ ಮಸೂದೆಯೂ ಅಂಗೀಕಾರಗೊಂಡಿತು.
ಹಿಂದೂಮಹಾಸಾಗರ- ಪೆಸಿಫಿಕ್ ವಲಯದಲ್ಲಿ ಭಾರತ ಮತ್ತು ಇತರ ದೇಶಗಳ ವಿರುದ್ಧ ನಡೆಸಲಾಗುತ್ತಿರುವ ಸೇನಾ ಆಕ್ರಮಣವನ್ನು ಕೊನೆಗೊಳಿಸುವಂತೆ ಚೀನಾಕ್ಕೆ ಕರೆ ನೀಡುವ ನಿರ್ಣಯವನ್ನು ಭಾರತೀಯ-ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಮಂಡಿಸಿದ್ದರು. ಅಮೆರಿಕ ಕಾಂಗ್ರೆಸ್‌ನ ಎರಡು ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಡಿಸೆಂಬರ್ 15ರಂದು ಅದಕ್ಕೆ ಅನುಮೋದನೆ ನೀಡಿದ್ದವು.





