ಮದ್ಯದ ಅಮಲಿನಲ್ಲಿ ಪತ್ನಿಯ ಕೊಲೆಗೈದು ಪರಾರಿ: ಆರೋಪಿ ಪತಿ ಬಂಧನ

ಬೆಂಗಳೂರು, ಜ.2: ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪ ಸಂಬಂಧ ಪತಿಯನ್ನು ಇಲ್ಲಿನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಮ್ ಬಹದ್ದೂರ್ ಬಂಧಿತ ಆರೋಪಿಯಾಗಿದ್ದು, ಧೂಪಿದೇವಿ ಕೊಲೆಯಾದ ಮಹಿಳೆಯಾಗಿದ್ದಾರೆ. ದಂಪತಿ ಮೂಲತಃ ನೇಪಾಳದವರಾಗಿದ್ದು, ಎರಡು ವರ್ಷಗಳ ಹಿಂದೆ ನಗರದ ಹೊರಮಾವಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
ಜೀವನಕ್ಕಾಗಿ ರಾಮ್ ಬಹದ್ದೂರ್ ಐಸ್ ಕ್ರೀಂ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ ಇಬ್ಬರು ಗಂಡು-ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬ ಅನ್ಯೋನ್ಯವಾಗಿತ್ತು. ಈ ನಡುವೆ ಮದ್ಯ ಸೇವನೆ ಚಟ ಬೆಳೆಸಿಕೊಂಡಿದ್ದ ರಾಮ್, ಪ್ರತಿದಿನ ಕುಡಿದು ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದೇ ವಿಚಾರವಾಗಿ ಈ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರವೂ ಇದೇ ವಿಚಾರವಾಗಿ ಗಲಾಟೆ ನಡೆದಾಗ ಚಾಕುವಿನಿಂದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡ ಹೆಣ್ಣೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





