ಸಾರಿಗೆ ನೌಕರರ ತುಟ್ಟಿಭತ್ತೆ ಹಿಂದಿರುಗಿಸಲು ಒತ್ತಾಯ
ಬೆಂಗಳೂರು, ಜ.2: ಕಾರ್ಮಿಕ ಕಾನೂನುಗಳನ್ನು ಬದಿಗೊತ್ತಿ ಜ.1, 2020ರಿಂದ ಜೂ.30ರವರೆಗೆ(18 ತಿಂಗಳು) ಸಾರಿಗೆ ನೌಕರರ ತುಟ್ಟಿಭತ್ತೆ ಸ್ಥಗಿತಗೊಳಿಸಲಾಗಿದ್ದು, ಇದರಿಂದ ನೌಕರರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಕೂಡಲೇ ರಾಜ್ಯ ಸರಕಾರ ತಡೆಹಿಡಿದಿರುವ ತುಟ್ಟಿ ಭತ್ತೆಯನ್ನು ಹಿಂದಿರುಗಿಸಬೇಕೆಂದು ಕೆಎಸ್ಸಾಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2004ರಂದು ರಾಜ್ಯ ಸರಕಾರದ ಆದೇಶ ಮೇರೆಗೆ ಸಾರಿಗೆ ನೌಕರರ ತುಟ್ಟಿಭತ್ತೆ ಬಾಕಿಯನ್ನು ನಮ್ಮಿಂದ ಕಿತ್ತುಕೊಂಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲು ತೀರ್ಮಾನಿಸಲಾಗಿತ್ತು. ಆ ಸಂದರ್ಭದಲ್ಲಿ ಹೈಕೋರ್ಟ್ ಡಿ.13, 2010ರಂದು ತಟ್ಟಿಭತ್ತೆ ಕಡಿತ ಕಾನೂನು ಬಾಹಿರವೆಂದು ನಿರ್ದೇಶನ ಕೊಟ್ಟಿತು. ಈ ಆದೇಶದನ್ವಯ ಜ.1, 2020ರಿಂದ ಕಡಿತ ಮಾಡಿರುವ ತುಟ್ಟಿಭತ್ತೆಯನ್ನು ಹಿಂದುರಿಗಿಸಬೇಕೆಂದು ಒತ್ತಾಯಿಸಿದ್ದಾರೆ.
ರಸ್ತೆ ಸಾರಿಗೆ ಸಂಸ್ಥೆಗಳ ಕಾಯ್ದೆ 1950 ಕಲಂ 34ರಲ್ಲಿ ದತ್ತವಾಗಿರುವ ಅಧಿಕಾರವನ್ನು ಜಾರಿ ಮಾಡಿ 2002ರಂದು ಮತ್ತು ಆ ನಂತರ ಹೊಸದಾಗಿ ನೇಮಕಗೊಂಡ, ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉಪಾದಾನವನ್ನು ಉಪಾದಾನ ಪಾವತಿ ಕಾಯ್ದೆ-1972ರನ್ವಯ ಪಾವತಿ ಮಾಡತಕ್ಕದ್ದು ಎಂದು ಆದೇಶ ಹೊರಡಿಸಿದೆ. ಇದರಿಂದ 2002ರ ನಂತರ ನೇಮಕಾತಿಗೊಂಡಿರುವ ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ ಲಕ್ಷಾಂತರ ರೂ.ನಷ್ಟವಾಗಲಿದೆ.
ಈ ಏಕಪಕ್ಷೀಯ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಅ.30, 2019ರಂದು ಕೆಎಸ್ಸಾರ್ಟಿಸಿ ಆಡಳಿತ ವರ್ಗಕ್ಕೆ ಪತ್ರ ಬರೆದಿದ್ದೆವು. ಅವರು ಬೇಜವಾಬ್ದಾರಿಯಿಂದ ತಮ್ಮ ಕಾನೂನುಬಾಹಿರ ಕ್ರಮವನ್ನು ಸಮರ್ಥಿಸಿಕೊಳ್ಳಲು ಈವರೆಗೆ ಯಾವುದೇ ಉತ್ತರ ಕಳಿಸಿಲ್ಲ. ಹೀಗಾಗಿ ಫೆಡರೇಷನ್ ವತಿಯಿಂದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಮನವಿಯನ್ನು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







