ಮೂರು ವರ್ಷಗಳ ಅವಧಿ ಪೂರೈಸಿದ ಭಾರತದ ಪ್ರಥಮ ಸಾಂಸ್ಕೃತಿಕ ರಾಯಭಾರಿ

ವಾಶಿಂಗ್ಟನ್, ಜ. 2: ‘ವಸುಧೈವ ಕುಟುಂಬಕಮ್’ ಎಂಬ ವೇದ ಸಿದ್ಧಾಂತವು ಕೊರೋನ ವೈರಸ್ ಪೀಡಿತ ಜಗತ್ತಿನಲ್ಲಿ ಹೆಚ್ಚು ಪ್ರಸ್ತುತವಾಗಿದೆ ಎಂದು ಅವೆುರಿಕಕ್ಕೆ ಭಾರತದ ಮೊದಲ ಸಾಂಸ್ಕೃತಿಕ ರಾಯಭಾರಿ ಮೋಕ್ಷರಾಜ್ ಅಭಿಪ್ರಾಯಪಟ್ಟಿದ್ದಾರೆ. ಅವರು ಸಾಂಸ್ಕೃತಿಕ ರಾಯಭಾರಿಯಾಗಿ ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ಸಂಸ್ಕೃತ ಮತ್ತು ಹಿಂದಿಯನ್ನು ಕಲಿಸುತ್ತಾ ಹಾಗೂ ಯೋಗ ಮತ್ತು ಧ್ಯಾನದ ಜೊತೆಗೆ ಸಾಂಪ್ರದಾಯಿಕ ಭಾರತೀಯ ಸಂಸ್ಕೃತಿಯನ್ನು ಪ್ರಸಾರಿಸುತ್ತಾ ಮೂರು ವರ್ಷಗಳನ್ನು ಪೂರೈಸಿದ್ದಾರೆ.
‘‘ ವಸುಧೈವ ಕುಟುಂಬಕಮ್’ (ಇಡೀ ಜಗತ್ತೇ ಒಂದು ಕುಟುಂಬದಂತೆ) ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ ಏಕೈಕ ದೇಶ ಭಾರತವಾಗಿದೆ. ಭಾರತದ ಈ ಕಲ್ಪನೆಯು ಹೊಸತೇನಲ್ಲ, ಅದು ಮಾನವನ ಮೂಲದಿಂದಲೇ ಇದೆ. ಯಜುರ್ವೇದದ ‘ಯಾತ್ರಾ ವಿಶ್ವ ಭವತ್ಯೇಕನಿದಮ್’ (ಇಲ್ಲಿ ಜಗತ್ತೇ ಒಂದು ಗೂಡಿನಂತೆ) ಎಂಬ ಕಲ್ಪನೆಯಿಂದ ಅದು ಪ್ರಭಾವಿತಗೊಂಡಿದೆ’’ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯ ಸಂಸ್ಕೃತಿಯ ಶಿಕ್ಷಕರಾಗಿ ತನ್ನ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ಮೋಕ್ಷರಾಜ್ ಹೇಳಿದರು.
ಭಾರತೀಯ ಸಂಸ್ಕೃತಿಯ ಬಗ್ಗೆ ಜಗತ್ತಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಕೇಂದ್ರ ಸರಕಾರದ ಕಾರ್ಯಕ್ರಮದ ಭಾಗವಾಗಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು ಮೂರು ವರ್ಷಗಳ ಹಿಂದೆ ಜಗತ್ತಿನ ವಿವಿಧ ದೇಶಗಳಿಗೆ 162 ಶಿಕ್ಷಕರನ್ನು ಕಳುಹಿಸಿಕೊಟ್ಟಿತ್ತು. ಅವರ ಪೈಕಿ ಮೋಕ್ಷರಾಜ್ ಒಬ್ಬರಾಗಿದ್ದಾರೆ.





