ಟ್ರಂಪ್ ವೀಟೊ ತಳ್ಳಿ ಹಾಕಿ ರಕ್ಷಣಾ ಮಸೂದೆ ಅಂಗೀಕಾರ; ನಿರ್ಗಮನ ಅಧ್ಯಕ್ಷಗೆ ಭಾರೀ ಹಿನ್ನಡೆ

ವಾಶಿಂಗ್ಟನ್, ಜ. 2: ಅಮೆರಿಕದ ರಕ್ಷಣಾ ಮಸೂದೆ ಅಂಗೀಕಾರಗೊಳ್ಳದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಲಾಯಿಸಿದ ವೀಟೊವನ್ನು ಸೆನೆಟ್ ಶುಕ್ರವಾರ ಭಾರೀ ಬಹುಮತದಿಂದ ತಳ್ಳಿಹಾಕಿದೆ ಹಾಗೂ ಆ ಮೂಲಕ ಅಧಿಕಾರದ ಕೊನೆಯ ದಿನಗಳಲ್ಲಿರುವ ಟ್ರಂಪ್‌ಗೆ ದೊಡ್ಡ ಹೊಡೆತವೊಂದನ್ನು ನೀಡಿದೆ.
ಟ್ರಂಪ್ ಅಧಿಕಾರಾವಧಿಯಲ್ಲಿ ಅವರ ವೀಟೊವನ್ನು ಸಂಸದರು ತಳ್ಳಿಹಾಕಿರುವುದು ಇದೇ ಮೊದಲ ಬಾರಿಯಾಗಿದೆ.
ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ನಿಯಂತ್ರಣದಲ್ಲೇ ಇರುವ ಸೆನೆಟ್, ಟ್ರಂಪ್ ಚಲಾಯಿಸಿದ ವೀಟೊವನ್ನು 81-13 ಮತಗಳ ಬೃಹತ್ ಅಂತರದಿಂದ ಹಿಮ್ಮೆಟ್ಟಿಸಿತು. ವೀಟೊವನ್ನು ತಳ್ಳಿಹಾಕಲು 100 ಸದಸ್ಯರ ಸದನ ಸೆನೆಟ್‌ನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು.
ಇದರೊಂದಿಗೆ, 2021ರ ಹಣಕಾಸು ವರ್ಷದಲ್ಲಿ ಸೇನೆಗೆ 740.5 ಬಿಲಿಯ ಡಾಲರ್ (ಸುಮಾರು 54.12 ಲಕ್ಷ ಕೋಟಿ ರೂಪಾಯಿ) ಅನುದಾನ ಒದಗಿಸುವ ಮಸೂದೆಗೆ ಅಂಗೀಕಾರ ಲಭಿಸಿದೆ.
ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿರುವ ಸದನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸೋಮವಾರ ಟ್ರಂಪ್‌ರ ವೀಟೊವನ್ನು 322-87 ಮತಗಳ ಅಂತರದಿಂದ ತಳ್ಳಿಹಾಕಿತ್ತು.
ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಎರಡೂ ಸದನಗಳು ಈ ಮಸೂದೆಗೆ ಡಿಸೆಂಬರ್ ಆದಿ ಭಾಗದಲ್ಲಿ ಪ್ರಬಲ ಬಹುಮತದ ಮೂಲಕ ಅನುಮೋದನೆ ನೀಡಿದ್ದವು. ಆದರೆ, ಮಸೂದೆಯಲ್ಲಿ ಹಲವಾರು ದೋಷಗಳಿವೆ ಎಂದು ಹೇಳಿ ಡಿಸೆಂಬರ್ 23ರಂದು ವೀಟೊ ಚಲಾಯಿಸಿದ್ದರು.
‘‘ಈ ಮಸೂದೆಯನ್ನು ದೇಶಕ್ಕೆ ನೀಡುವ ಸಮಯ ಬಂದಿದೆ’’ ಎಂಬುದಾಗಿ ಶುಕ್ರವಾರದ ಅಧಿವೇಶನದ ಆರಂಭದಲ್ಲಿ ರಿಪಬ್ಲಿಕನ್ ಪಕ್ಷದ ಸೆನೆಟ್ ಮೆಜಾರಿಟಿ ನಾಯಕ ಮಿಚ್ ಮೆಕಾನೆಲ್ ಹೇಳಿದರು.
ತನ್ನ ಅಧಿಕಾರದ ಕೊನೆಯ ದಿನಗಳಲ್ಲಿರುವ ಟ್ರಂಪ್‌ಗೆ ಇದು ದೊಡ್ಡ ಹಿನ್ನಡೆಯಾಗಿದೆ.
ರಕ್ಷಣಾ ಮಸೂದೆಯು ಚೀನಾ ಮತ್ತು ರಶ್ಯಕ್ಕೆ ನೀಡಿದ ‘ಉಡುಗೊರೆ’ಯಾಗಿದೆ ಎಂಬುದಾಗಿ ಟ್ರಂಪ್ ಹೇಳಿದ್ದಾರೆ. ಅದೂ ಅಲ್ಲದೆ, ಅಫ್ಘಾನಿಸ್ತಾನ, ದಕ್ಷಿಣ ಕೊರಿಯ ಮತ್ತು ಇತರ ದೇಶಗಳಲ್ಲಿ ಇರುವ ಅಮೆರಿಕ ಸೈನಿಕರ ಸಂಖ್ಯೆಯನ್ನು ಕಡಿತಗೊಳಿಸುವ ನನ್ನ ಅಧಿಕಾರವನ್ನು ಮಸೂದೆ ನಿರ್ಬಂಧಿಸುತ್ತದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.







