ಅತಿ ದೊಡ್ಡ ಜಲಾಗರಗಳಲ್ಲಿ ಕಣ್ಗಾವಲಿಗಾಗಿ 12 ವೇಗದ ಗಸ್ತು ದೋಣಿಗಳನ್ನು ಖರೀದಿಸಲು ಒಪ್ಪಂದ

ಹೊಸದಿಲ್ಲಿ, ಜ. 1: ಭಾರತ ಹಾಗೂ ಚೀನಾ ನಡುವಿನ ವಾಸ್ತವ ನಿಯಂತ್ರಣ ರೇಖೆಯಲ್ಲಿರುವ ಲಡಾಖ್‌ನ ಪಾಂಗೋಂಗ್ ತ್ಸೋ ಸರೋವರದಲ್ಲಿ ಕಣ್ಗಾವಲು ಸುಧಾರಿಸಲು 12 ವೇಗದ ಗಸ್ತು ದೋಣಿಗಳನ್ನು ಖರೀದಿಸಲು ಭಾರತೀಯ ಸೇನೆ ಗೋವಾ ಶಿಪ್‌ಯಾರ್ಡ್‌ನೊಂದಿಗೆ ಶುಕ್ರವಾರ ಒಪ್ಪಂದ ಮಾಡಿಕೊಂಡಿದೆ.
‘‘ಅತಿ ಎತ್ತರದ ಪ್ರದೇಶದಲ್ಲಿರುವುದು ಸೇರಿದಂತೆ ಅತಿ ದೊಡ್ಡ ಜಲಾಗರಗಳಲ್ಲಿ ಕಣ್ಗಾವಲು ಹಾಗೂ ಗಸ್ತು ನಡೆಸಲು 12 ವೇಗದ ಗಸ್ತು ದೋಣಿಗಳನ್ನು ಖರೀದಿಸಲು ಭಾರತೀಯ ಸೇನೆ ಗೋವಾ ಶಿಪ್ ಯಾರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ದೋಣಿಗಳು 2021ರ ಮೇಯಲ್ಲಿ ಲಭ್ಯವಾಗಲಿವೆ’’ ಎಂದು ಸೇನೆ ಟ್ವೀಟ್‌ನಲ್ಲಿ ತಿಳಿಸಿದೆ. ಮುಂದಿನ ಬೇಸಿಗೆಯ ಆರಂಭದಲ್ಲಿ ಹಿಮ ಕರಗಿದಾಗ ಭಾರತೀಯ ಸೇನೆ ಹಾಗೂ ಚೀನಾ ಸೇನೆ ತಮ್ಮ ಗಸ್ತು ಚಟುವಟಿಕೆಗಳನ್ನು ಪುನರಾರಂಭಿಸುವ ಹೊತ್ತಿಗೆ ಈ ದೋಣಿಗಳು ನಿಯೋಜನೆಯಾಗಲಿವೆ ಎಂದು ಅದು ತಿಳಿಸಿದೆ.
ಪ್ರಸ್ತುತ ಭಾರತೀಯ ಸೇನೆಯಲ್ಲಿ ವೇಗದ 17 ಗಸ್ತು ದೋಣಿಗಳು ಇವೆ. ಆದರೆ, ಭಾರತದ ಸೇನಾ ಪಡೆ ಹಾಗೂ ಚೀನಾ ಸೇನಾ ಪಡೆಗಳ ನಡುವಿನ ಸಂಘರ್ಷ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ವೇಗದ ಗಸ್ತು ದೋಣಿಗಳ ಅಗತ್ಯತೆ ಇದೆ. ಕಳೆದ ಕೆಲವು ವರ್ಷಗಳಿಂದ ಚೀನಾ ಸೇನೆ ವೇಗದ ಕಣ್ಗಾವಲು ದೋಣಿಗಳನ್ನು ನಿಯೋಜಿಸಿದೆ. ಅಲ್ಲದೆ, ಸರೋವರದಲ್ಲಿ ಕಣ್ಗಾವಲು ಇರಿಸಲು ಹೊಸ ದೋಣಿ ಮನೆಗಳನ್ನು ನಿರ್ಮಿಸಿದೆ. ಪ್ರಸ್ತುತ ವಿವಾದಿತ ಗಡಿ ರೇಖೆಯ ಉಭಯ ಕಡೆಗಳಲ್ಲಿ ಸುಮಾರು 50 ಸಾವಿರ ಯೋಧರು ಬೀಡು ಬಿಟ್ಟಿದ್ದಾರೆ. ಚೀನಾ ಸೇನೆ ಹಲವು ಸ್ಥಳಗಳಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿರುವುದು ಹಾಗೂ ಅತಿಕ್ರಮಿಸಿಕೊಂಡಿರುವುದನ್ನು ಕಳೆದ ವರ್ಷ ಬೇಸಿಗೆಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭ ಭಾರತೀಯ ಸೇನೆ ಪತ್ತೆ ಮಾಡಿತ್ತು. ಇದು 1962ರ ಯುದ್ಧದ ಬಳಿಕ ಮೊದಲ ಭಾರತ-ಚೀನಾ ನಡುವಿನ ಅತಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಿತ್ತು.







