ಬೆಂಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಡಿಜಿಪಿ

ಬೆಂಗಳೂರು, ಜ.3: ನಿವೃತ್ತ ಡಿಜಿಪಿ ಪಿ.ಜಿ.ಹಲರ್ಂಕರ್( 88) ನಿಧನರಾಗಿದ್ದು, ಅವರ ಮೃತ ದೇಹವನ್ನು ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹಲರ್ಂಕರ್ ಅವರು ಅನಾರೋಗ್ಯ ಹಿನ್ನೆಲೆ ವಿಕ್ರಮ್ ಆಸ್ಪತ್ರೆಯಲ್ಲಿ ದಾಖಲಾಗಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ತಡರಾತ್ರಿ ನಿಧನರಾದರು. ಅವರ ಇಚ್ಛೆಯಂತೆ, ಅವರ ಪಾರ್ಥೀವ ಶರೀರವನ್ನು ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದರು.
ಹಲರ್ಂಕರ್ ಅವರು ಮಾರ್ಚ್ 1983 ರಿಂದ ಡಿಸೆಂಬರ್ 1986ರವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಮೀಸಲು ಪಡೆಯ ಡಿಜಿ ಆಗಿ ಹಲರ್ಂಕರ್ ನಿವೃತ್ತಿ ಹೊಂದಿದ್ದರು. ತದನಂತರ ಬೆಂಗಳೂರಿನ ಪುಲಿಕೇಶಿನಗರದ ರಿಚಡ್ರ್ಸ್ ಟೌನ್‍ನಲ್ಲಿ ವಾಸವಿದ್ದರು.
ಸಂತಾಪ: ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ್ದ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಜಿ.ಹಲರ್ಂಕರ್ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಮತ್ತು ಶುಭ್ರ ಆಡಳಿತಕ್ಕೆ ಹೆಸರಾಗಿದ್ದ ಹಲರ್ಂಕರ್ ಅವರು ಪೊಲೀಸ್ ಸಮವಸ್ತ್ರವನ್ನು ತಮ್ಮ ಧರ್ಮವನ್ನಾಗಿ ಸ್ವೀಕರಿಸಿ ಕೆಲಸ ಮಾಡಿದ್ದರು. ಅವರು ತಮ್ಮ ದೇಹವನ್ನು ಚಿಕಿತ್ಸಾ ಉದ್ದೇಶಗಳಿಗಾಗಿ ಆಸ್ಪತ್ರೆಗೆ ದಾನ ಮಾಡಿ ಮಾದರಿಯಾಗಿದ್ದಾರೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.







