ಜನರ ನಾಡಿಮಿಡಿತ ಅರಿತು ಜವಾಬ್ದಾರಿ ನಿಭಾಯಿಸಿಕೊಳ್ಳಿ : ಅಬ್ದುಲ್ ಮಜೀದ್ ಮೈಸೂರು
ಗ್ರಾಪಂ ಚುನಾವಣೆಯ ವಿಜೇತ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ

ಮಂಗಳೂರು, ಜ.3: ಗ್ರಾಪಂ ಚುನಾವಣೆಯ ವಿಜೇತ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಜನರ ನಾಡಿಮಿಡಿತ ಅರಿತು ಜವಾಬ್ದಾರಿ ನಿಭಾಯಿಸಿಕೊಳ್ಳ ಬೇಕು ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಕರೆ ನೀಡಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಪಕ್ಷದ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ಪುರಭವನದಲ್ಲಿ ರವಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣಗೈದರು.
ಎಸ್‌ಡಿಪಿಐ ಬೆಂಬಲದಿಂದ ಗೆಲುವು ಸಾಧಿಸಿದ ಜಿಲ್ಲೆಯ ಪ್ರತಿಯೊಬ್ಬ ಅಭ್ಯರ್ಥಿಯೂ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕೇ ವಿನಃ ಜನರು ನಿಮ್ಮ ಮನೆ ಬಾಗಿಲಿಗೆ ಬರುವಂತಹ ಸನ್ನಿವೇಶ ಸೃಷ್ಟಿಸಬೇಡಿ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯಾವುದೇ ಕಾರಣಕ್ಕೂ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆಯಬಾರದು. ಭ್ರಷ್ಟಾಚಾರ ಎಸಗಬಾರದು. ಒಂದು ವೇಳೆ ಅಂತಹ ತಪ್ಪು ಮಾಡಿದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಅಬ್ದುಲ್ ಮಜೀದ್ ಎಚ್ಚರಿಸಿದರು.
ಇತ್ತೀಚಿನ ಗ್ರಾಪಂ ಚುನಾವಣೆಯಲ್ಲಿ ರಾಜ್ಯದ 200ಕ್ಕೂ ಅಧಿಕ ಸದಸ್ಯರು ಎಸ್‌ಡಿಪಿಐ ಬೆಂಬಲದಿಂದ ಗೆಲುವು ಸಾಧಿಸಿದ್ದಾರೆ. ಅದರಲ್ಲೂ ದ.ಕ.ಜಿಲ್ಲೆಯಲ್ಲೇ 171 ಮಂದಿ ಗೆದ್ದಿರುವುದು ಶ್ಲಾಘನೀಯ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ, ಮತದಾರರ ದೃಢ ನಿಲುವು ಈ ಗೆಲುವಿನ ಹಿಂದಿದೆ ಎಂಬುದನ್ನು ವಿಜೇತ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು. ದ.ಕ.ಜಿಲ್ಲೆಯಲ್ಲಿ ಪಕ್ಷದ ಫಲಿತಾಂಶವು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸ ಒದಗಿಸಿರುವುದು ಗಮನಾರ್ಹವಾಗಿದೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ದ.ಕ.ಜಿಲ್ಲಾ ಎಸ್ಡಿಪಿಐ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸೋ ಫ್ರಾಂಕೋ, ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿಯ ಸದಸ್ಯ ರಿಯಾಝ್ ಫರಂಗಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ಮುಜಾಹಿದ್ ಪಾಶಾ, ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲ್, ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐಎಂಆರ್, ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್., ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ, ವಿಮೆನ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಎಸ್‌ಡಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಜಲೀಲ್ ಕೃಷ್ಣಾಪುರ, ಕಾರ್ಪೊರೇಟರ್‌ಗಳಾದ ಮುನೀಬ್ ಬೆಂಗರೆ, ಶಂಶಾದ್ ಅಬೂಬಕರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಹಮೀದ್ ಹೊಸಂಗಡಿ, ಪಕ್ಷದ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸುಹೈಲ್ ಖಾನ್, ಬಂಟ್ವಾಳ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಹೈದರ್ ನಿರ್ಸಾಲ್, ಸುಳ್ಯ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಕಲಾಂ ಸುಳ್ಯ, ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿಸಾರ್ ಮರವೂರು, ಕಡಬ ತಾಲೂಕು ಸಮಿತಿಯ ಅಧ್ಯಕ್ಷ ರಫೀಕ್ ನೆಲ್ಯಾಡಿ ಉಪಸ್ಥಿತರಿದ್ದರು.






















