ದೇಶದಲ್ಲಿ ಜಾತಿ ವಿನಾಶ ಅಸಾಧ್ಯ: ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಬೆಂಗಳೂರು, ಜ.3: ಬುದ್ದನಂತಹ, ಬಸವಣ್ಣನಂತಹ, ಅಂಬೇಡ್ಕರ್ ಅಂತನ ನೂರು ಮಂದಿ ಹುಟ್ಟಿ ಬಂದರೂ ದೇಶದಲ್ಲಿ ಜಾತಿಯನ್ನು ನಿರ್ಮೂಲನೆ ಮಾಡುವುದು ಅಸಾಧ್ಯವೆಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಾವಿತ್ರಿ ಬಾಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇನ್ನು ನೂರು ವರ್ಷ ಕಳೆದರೂ ಜಾತಿ ನಾಶವಾಗುವುದಿಲ್ಲವೆಂಬುದು ಸ್ಪಷ್ಟ. ಹೀಗಾಗಿ ಜಾತಿ ವಿನಾಶದ ಕಾರ್ಯಕ್ರಮಗಳ ಬದಲಾಗಿ, ಜಾತಿ ವಿಕಾಸ ಕಾರ್ಯಕ್ರಮಗಳು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ನಾನು ಈ ಹಿಂದೆ ಜಾತಿ ವಿನಾಶವಾಗುತ್ತದೆಯೆಂದು ನಂಬಿದ್ದೆ. ಆ ಕುರಿತು ಪುಸ್ತಕವನ್ನು ರಚಿಸಿದ್ದೆ. ಆದರೆ, ಈಗ ನನಗೆ ಜಾತಿ ನಾಶವಾಗುವುದಿಲ್ಲವೆಂಬುದು ಸ್ಪಷ್ಟವಾಗಿದೆ. ಹೀಗಾಗಿ ಜಾತಿಗಳ ನಡುವೆ ಸಾಮರಸ್ಯಗಳನ್ನು ಮೂಡಿಸುವ ಕೆಲಸಗಳಾಗಬೇಕೆಂದು ಅವರು ಹೇಳಿದ್ದಾರೆ.
ಈಗ ಜಾತಿಯಿಂದ ಗುರುತಿಸಿಕೊಳ್ಳುವುದರಿಂದ ಬ್ರಾಹ್ಮಣರಿಗೆ ಎಷ್ಟು ಅನುಕೂಲವಿದೆಯೋ, ಅಷ್ಟೆ ಅನುಕೂಲಕ ದಲಿತ ಸಮುದಾಯಕ್ಕೂ ಇದೆ. ಹೀಗಾಗಿ ಯಾರೋ ಒಂದಿಬ್ಬರು ಜಾತಿಯನ್ನು ಬಿಡಬಹುದು. ಆದರೆ, ಬಹುತೇಕರು ಬಿಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.
ನಮ್ಮ ಸಮಾಜದ ಮುಗ್ಧ ಜನರು ದಾರಿ ತಪ್ಪುತ್ತಿರುವುದಕ್ಕೆ ಬುದ್ದಿ ಜೀವಿಗಳೇ ಮುಖ್ಯ ಕಾರಣ. ಜಾತಿ ವಿನಾಶವೆಂದು ಹೇಳುತ್ತಾ ಜನತೆಯ ಸಾಕಷ್ಟು ಸಮಯವನ್ನು ಹಾಳು ಮಾಡಿದ್ದಾರೆ. ಜಾತಿ-ಜಾತಿಗಳ ನಡುವಿರುವ ತಾರತಮ್ಯ, ವೈಮನಸುಗಳನ್ನು ಹೋಗಲಾಡಿಸುವ ಕಡೆಗೆ ಕಾರ್ಯೋನ್ಮುಖರಾಗಬೇಕಿದೆ.
ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ







