ಉಡುಪಿ: 19 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
ಉಡುಪಿ, ಜ.3: ಜಿಲ್ಲೆಯಲ್ಲಿ ರವಿವಾರ ಹೊಸದಾಗಿ 19 ಮಂದಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ದಿನದಲ್ಲಿ ನಾಲ್ವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಸದ್ಯ 96 ಮಂದಿ ಸೋಂಕಿಗಾಗಿ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ 10 ಮಂದಿ ಪುರುಷರು ಮತ್ತು ಒಂಭತ್ತು ಮಂದಿ ಮಹಿಳೆಯರು. ಪಾಸಿಟಿವ್ ಬಂದ ಎಂಟು ಪುರುಷರು ಹಾಗೂ ಏಳು ಮಂದಿ ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಇವರಲ್ಲಿ 14 ಮಂದಿಗೆ ಹೋಮ್ ಐಸೋಲೇಷನ್ ಹಾಗೂ ಐವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.
ನಾಲ್ವರು ಗುಣಮುಖ: ಶನಿವಾರ ಜಿಲ್ಲೆಯ ನಾಲ್ವರು ಚಿಕಿತ್ಸೆ ಬಳಿಕ ಚೇತರಿಸಿ ಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತರಾದ ವರ ಒಟ್ಟು ಸಂಖ್ಯೆ ಈಗ 22,820ಕ್ಕೇರಿದೆ. ಸದ್ಯ 96 ಮಂದಿ ಕೆವಿಡ್ಗೆ ಸಕ್ರಿಯರಿದ್ದಾರೆ ಎಂದರು.
2898 ಮಂದಿ ನೆಗೆಟಿವ್: ಶನಿವಾರ ಒಟ್ಟು 2918 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 2898 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ 20 ಮಂದಿಯಲ್ಲಿ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,104 ಆಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಶನಿವಾರದವರೆಗೆ ಒಟ್ಟು 2,91,756 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 2,68,652 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,104 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,820 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್ ನಿಂದ ಯಾರೂ ಮೃತಪಟ್ಟಿಲ್ಲ. ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 188 ಮಾತ್ರ ಎಂದು ಇಲಾಖೆ ತಿಳಿಸಿದೆ.