ಇರಾನ್ ಸೇನಾಧಿಕಾರಿ ಹತ್ಯೆಯ ಮೊದಲ ವಾರ್ಷಿಕ ಪುಣ್ಯತಿಥಿ: ಇರಾಕ್‌ನಲ್ಲಿ ಬೃಹತ್ ಮೆರವಣಿಗೆ

ಬಗ್ದಾದ್ (ಇರಾಕ್), ಜ. 3: ಇರಾನ್‌ನ ಉನ್ನತ ಸೇನಾಧಿಕಾರಿ ಖಾಸಿಮ್ ಸುಲೈಮಾನಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಮೊದಲ ವಾರ್ಷಿಕ ಪುಣ್ಯತಿಥಿಯ ಮುನ್ನಾದಿನವಾದ ಶನಿವಾರ ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಜನರು ಬೃಹತ್ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಜನರು ಮೃತ ಸೇನಾಧಿಕಾರಿಯ ಅಣಕು ಶವ ಮೆರವಣಿಗೆಯನ್ನೂ ಏರ್ಪಡಿಸಿದರು.
ಕಳೆದ ವರ್ಷದ ಜನವರಿ 3ರಂದು ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸುಲೈಮಾನಿಯ ವಾಹನಗಳ ಸಾಲನ್ನು ಗುರಿಯಾಗಿಸಿ ಅಮೆರಿಕದ ಡ್ರೋನ್‌ನಿಂದ ಕ್ಷಿಪಣಿ ಹಾರಿಸಲಾಗಿತ್ತು. ಅವರು ಆಗ ವಿಮಾನ ನಿಲ್ದಾಣದಲ್ಲಿ ಇಳಿದು ಇರಾಕ್ ಪ್ರಧಾನಿಯ ಕಚೇರಿಗೆ ಹೋಗುತ್ತಿದ್ದರೆನ್ನಲಾಗಿದೆ. ದಾಳಿಯಲ್ಲಿ ಸುಲೈಮಾನಿ, ಇರಾಕ್‌ನ ಖಾಸಗಿ ಪಡೆಯೊಂದರ ನಾಯಕ ಅಬು ಮಹದಿ ಅಲ್-ಮುಹಂದಿಸ್ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ.
ಬಗ್ದಾದ್ ವಿಮಾನ ನಿಲ್ದಾಣದತ್ತ ತೆರಳಿದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಜನರು ಸುಲೈಮಾನಿ ಮತ್ತು ಮುಹಂದಿಸ್‌ರ ಭಾವಚಿತ್ರಗಳನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸಿದರು.
ದಾಳಿ ನಡೆದ ಸ್ಥಳದಲ್ಲಿ ಸುಲೈಮಾನಿ ಮತ್ತು ಮುಹಂದಿಸ್‌ರ ಭಾವಚಿತ್ರಗಳನ್ನು ಇಡಲಾಗಿತ್ತು. ಜನರು ಅಲ್ಲಿ ಮೇಣದಬತ್ತಿಗಳನ್ನು ಹೊತ್ತಿಸಿದರು.
ಸುಲೈಮಾನಿ ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಉನ್ನತ ಘಟಕವಾಗಿರುವ ಖುದ್ಸ್ ಫೋರ್ಸ್‌ನ ಮುಖ್ಯಸ್ಥರಾಗಿದ್ದರು. ಹೊರದೇಶಗಳಲ್ಲಿನ ಸೇನಾ ಕಾರ್ಯಾಚರಣೆಯ ಹೊಣೆಯನ್ನು ಈ ಸೇನಾ ಘಟಕ ಹೊತ್ತಿದೆ. ತನ್ನ ಕೆಲಸದ ಭಾಗವಾಗಿ ಸುಲೈಮಾನಿ ನಿರಂತರವಾಗಿ ಇರಾಕ್, ಲೆಬನಾನ್ ಮತ್ತು ಸಿರಿಯಗಳ ನಡುವೆ ಓಡಾಡುತ್ತಿದ್ದರು.
ಶತ್ರುವಿನ ಯಾವುದೇ ಕೃತ್ಯಕ್ಕೆ ನಿರ್ಣಾಯಕ ಪ್ರತಿಕ್ರಿಯೆ: ರೆವಲೂಶನರಿ ಗಾರ್ಡ್ಸ್ ಮುಖ್ಯಸ್ಥ ಎಚ್ಚರಿಕೆ
‘‘ಶತ್ರು ತೆಗೆದುಕೊಳ್ಳುವ ಯಾವುದೇ ಕ್ರಮ’’ಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಇರಾನ್‌ನ ಸೇನೆ ರೆವಲೂಶನರಿ ಗಾರ್ಡ್ಸ್‌ನ ಮುಖ್ಯಸ್ಥ ಹುಸೇನ್ ಸಲಾಮಿ ಶನಿವಾರ ಘೋಷಿಸಿದ್ದಾರೆ.
ಕಳೆದ ವರ್ಷ ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾಗಿರುವ ಇರಾನ್ ಸೇನೆಯ ಉನ್ನತ ನಾಯಕ ಖಾಸಿಮ್ ಸುಲೈಮಾನಿಯ ಮೊದಲ ವಾರ್ಷಿಕ ಪುಣ್ಯತಿಥಿಯ ಮುನ್ನಾ ದಿನದಂದು ಅವರು ಈ ಎಚ್ಚರಿಕೆ ನೀಡಿದ್ದಾರೆ.
ಆಯಕಟ್ಟಿನ ಅಬು ಮೂಸ ದ್ವೀಪಕ್ಕೆ ಭೇಟಿ ನೀಡಿ, ಅಲ್ಲಿರುವ ಇರಾನ್ ಸೈನಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
‘‘ಪರಿಸ್ಥಿತಿಯನ್ನು ಅವಲೋಕಿಸಲು ನಾವಿಂದು ಇಲ್ಲಿದ್ದೇವೆ. ನಮ್ಮ ಶತ್ರು ಕೆಲವು ಸಲ ಜಂಭಕೊಚ್ಚಿಕೊಳ್ಳುತ್ತದೆ ಹಾಗೂ ಬೆದರಿಕೆ ಹಾಕುತ್ತದೆ. ಸಮುದ್ರದಲ್ಲಿ ನಾವು ಹೊಂದಿರುವ ಸಾಮರ್ಥ್ಯದ ಬಗ್ಗೆ ಅರಿವಿರಲಿ’’ ಎಂದರು.







