ಮಂಗಳೂರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನ ಪಾಸಿಟಿವ್
ಮಂಗಳೂರು, ಜ. 3: ನಗರದ ಎರಡು ನರ್ಸಿಂಗ್ ಕಾಲೇಜುಗಳಲ್ಲಿ 77 ಕೊರೋನ ಪಾಸಿಟಿವ್ ವಿದ್ಯಾರ್ಥಿಗಳು ಕಂಡುಬಂದ ಬೆನ್ನಲ್ಲೇ ಈಗ ಮತ್ತೊಂದು ನರ್ಸಿಂಗ್ ಕಾಲೇಜಿನಲ್ಲೂ ಕೊರೋನ ಹಾವಳಿ ಪತ್ತೆಯಾಗಿದೆ. ಕೇರಳ ಮೂಲದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕೊರೋನ ಪಾಸಿಟಿವ್ ಇರುವುದು ಕಂಡುಬಂದಿದೆ.
ಕೊಟ್ಟಾರ ಚೌಕಿಯಲ್ಲಿ ಹಾಸ್ಟೆಲ್ ಹೊಂದಿರುವ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳಿಗೆ ರವಿವಾರ ಪಾಸಿಟಿವ್ ವರದಿ ಬಂದಿದೆ. ಈ ಕಾಲೇಜಿಗೆ ಮೊದಲ ಬ್ಯಾಚ್‌ನಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ್ದರು. ಆದರೆ ಎರಡನೇ ಬ್ಯಾಚ್‌ನ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ನಡೆಸದ ಕಾರಣ ಸಮಸ್ಯೆ ಉದ್ಭವಿಸಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.
ಈ ಮೊದಲು ಕೊರೋನ ಕಂಡುಬಂದ ಎರಡು ನರ್ಸಿಂಗ್ ಕಾಲೇಜುಗಳಲ್ಲಿ ರವಿವಾರ ಯಾವುದೇ ವಿದ್ಯಾರ್ಥಿಗೆ ಪಾಸಿಟಿವ್ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟನ್‌ನಿಂದ ಮಂಗಳೂರಿಗೆ ಇದುವರೆಗೆ ಆಗಮಿಸಿರುವ 118 ಮಂದಿಯಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರ ವರದಿ ನೆಗೆಟಿವ್ ಆಗಿದೆ. ರವಿವಾರ ಮೂರು ಮಂದಿಯ ವರದಿ ಬಂದಿದ್ದು, ರೂಪಾಂತರಿತ ವೈರಸ್ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.





