ಭಿನ್ನ ಕೋವಿಡ್ ಲಸಿಕೆಗಳ ಡೋಸ್ ನೀಡಲು ಬ್ರಿಟನ್ ಅನುಮೋದನೆ

ಲಂಡನ್, ಜ. 3: ಅಪರೂಪದ ಪ್ರಕರಣಗಳಲ್ಲಿ ಜನರಿಗೆ ಭಿನ್ನ ಕೋವಿಡ್-19 ಲಸಿಕೆಗಳ ಡೋಸ್‌ಗಳನ್ನು ನೀಡಲು ಬ್ರಿಟನ್ ಅನುಮೋದನೆ ನೀಡಿದೆ. ಆದರೆ, ಭಿನ್ನ ಲಸಿಕೆಗಳ ಡೋಸ್‌ಗಳು ಎಷ್ಟು ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಬಹುದು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ.
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಪರಿಣಾಮಕಾರಿ ರೋಗನಿರೋಧಕ ಶಕ್ತಿ ಬೆಳೆಯಬೇಕಾದರೆ ಜನರಿಗೆ ಹಲವು ವಾರಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಮೊದಲು ನೀಡಲಾದ ಲಸಿಕೆಯ ಡೋಸ್ ಲಭ್ಯವಿಲ್ಲದಿದ್ದರೆ ಅಥವಾ ಮೊದಲು ನೀಡಿದ ಲಸಿಕೆ ಯಾವುದೆಂದು ಗೊತ್ತಾಗದೆ ಹೋದರೆ ಲಭ್ಯವಿರುವ ಲಸಿಕೆಯನ್ನೇ ಎರಡನೇ ಡೋಸ್ ಆಗಿ ನೀಡಬಹುದಾಗಿದೆ ಎಂದು ಹೊಸ ಮಾರ್ಗದರ್ಶಿ ಸೂತ್ರಗಳು ಹೇಳಿವೆ.
‘‘ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಹೀಗೆ ಆಗಬಹುದಾಗಿದೆ. ಒಬ್ಬನೇ ವ್ಯಕ್ತಿಗೆ ಭಿನ್ನ ಲಸಿಕೆಗಳನ್ನು ನೀಡಲು ಸರಕಾರ ಶಿಫಾರಸು ಮಾಡುವುದಿಲ್ಲ. ಒಂದೇ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಇದು ಸಾಧ್ಯವಾಗದಿದ್ದರೆ, ಎರಡನೇ ಡೋಸ್ ಆಗಿ ಇನ್ನೊಂದು ಲಸಿಕೆಯನ್ನು ನೀಡಬಹುದಾಗಿದೆ. ಏನನ್ನೂ ನೀಡದೇ ಇರುವುದಕ್ಕಿಂತ ಇದು ಉತ್ತಮ’’ ಎಂದು ಪಬ್ಲಿಕ್ ಹೆಲ್ತ್ ಇಂಗ್ಲೆಂಡ್‌ನಲ್ಲಿ ರೋಗನಿರೋಧಕ ವಿಭಾಗದ ಮುಖ್ಯಸ್ಥೆ ಮೇರಿ ರ್ಯಾಮ್‌ಸೇ ಹೇಳಿದರು.





