ರೈತರ ಕ್ರೋಧವನ್ನು ಎದುರಿಸಲು ಯಾವುದೇ ಸರಕಾರಕ್ಕೂ ಸಾಧ್ಯವಿಲ್ಲ: ಪಿ.ಚಿದಂಬರಂ ಆಕ್ರೋಶ

ಹೊಸದಿಲ್ಲಿ,ಜ.4: ಪ್ರತಿಭಟನಾನಿರತ ರೈತರ ನಾಯಕರು ಮತ್ತು ಕೇಂದ್ರದ ನಡುವೆ ಸೋಮವಾರ ಆರಂಭಗೊಂಡ ಏಳನೇ ಸುತ್ತಿನ ಮಾತುಕತೆಗಳ ನಡುವೆಯೇ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು,ತಮ್ಮನ್ನು ಮೋಸಗೊಳಿಸಲಾಗುತ್ತಿದೆ ಎಂದು ಭಾವಿಸಿರುವ ರೈತರ ಕ್ರೋಧವನ್ನು ಎದುರಿಸಬೇಕಾದೀತು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೂರು ನೂತನ ಕೃಷಿ ಕಾನೂನುಗಳ ಕುರಿತಂತೆ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಕುರಿತು ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ತನ್ನ ಮೆಚ್ಚಿನ ಕವಿ-ಸಂತ ತಿರುವಳ್ಳುವರ್ ಅವರ ಉಕ್ತಿಯನ್ನು ಉಲ್ಲೇಖಿಸಿ ಟ್ವೀಟಿಸಿದ್ದಾರೆ.
‘ರೈತರು ಕೈಕಟ್ಟಿ ಕುಳಿತರೆ ಬದುಕನ್ನೇ ತ್ಯಜಿಸಿರುವ ವ್ಯಕ್ತಿಯು ಕೂಡ ಉಳಿಯುವುದಿಲ್ಲ ಎಂದು ನನ್ನ ಮೆಚ್ಚಿನ ಕವಿ-ಸಂತ ತಿರುವಳ್ಳುವರ್ ಅವರು 2,000 ವರ್ಷಗಳ ಹಿಂದೆಯೇ ಹೇಳಿದ್ದರು. ಈ ಮಾತು ಇಂದಿಗೂ ನಿಜವಾಗಿದೆ. ತಮ್ಮನ್ನು ಮೋಸಗೊಳಿಸಲಾಗಿದೆ ಎಂದು ನಂಬಿರುವ ರೈತರ ಕ್ರೋಧವನ್ನು ಎದುರಿಸಲು ಯಾವುದೇ ಸರಕಾರಕ್ಕೆ ಸಾಧ್ಯವಿಲ್ಲ ’ಎಂದು ಚಿದಂಬರಂ ಹೇಳಿದ್ದಾರೆ.
ನೂತನ ಕೃಷಿ ಕಾನೂನುಗಳ ರದ್ದತಿ ಬಾಕಿಯಿರುವಂತೆ ಅವುಗಳನ್ನು ಅಮಾನತಿನಲ್ಲಿರಿಸಲು ಸರಕಾರವು ಒಪ್ಪಿಕೊಳ್ಳಬೇಕು ಮತ್ತು ಯಾವುದೇ ಹೊಸ ಕಾನೂನು ರೈತ ಸಮುದಾಯದ ಅಗತ್ಯಗಳು ಮತ್ತು ಬೇಡಿಕೆಗಳನ್ನು ಒಳಗೊಂಡಿರಬೇಕು ಎಂದು ಅವರು ಶನಿವಾರ ಹೇಳಿದ್ದರು.







