ಕೋವಿಡ್-19:ದೇಶದಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 16,504ಕ್ಕೆ ಇಳಿಕೆ

ಹೊಸದಿಲ್ಲಿ,ಜ.4: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 16,504 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು,214 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,03,40,469ಕ್ಕೆ ಮತ್ತು ಸಾವುಗಳ ಸಂಖ್ಯೆ 1,49,649ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ಬೆಳಿಗ್ಗೆ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಜೂ.23 ಮತ್ತು ಡಿ.28ರ ಬಳಿಕ ಮೂರನೇ ಬಾರಿ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 16,000ಕ್ಕಿಂತ ಕಡಿಮೆಯಾಗಿದೆ.
ದೇಶದಲ್ಲಿ ಈಗ ಒಟ್ಟು 2,43,953 ಸಕ್ರಿಯ ಪ್ರಕರಣಗಳಿದ್ದು, 99,46,867 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಚೇತರಿಕೆ ದರವು ಶೇ.96.16ರಷ್ಟಿದ್ದರೆ, ಮರಣ ದರವು ಶೇ.1.45ರಷ್ಟಿದೆ.
ಮಹಾರಾಷ್ಟ್ರವು ಈಗಲೂ ಕೋವಿಡ್‌ನಿಂದ ತೀವ್ರ ಪೀಡಿತ ರಾಜ್ಯವಾಗಿ ಮುಂದುವರಿದಿದೆ. ಕೇರಳ, ಪ.ಬಂಗಾಳ, ಛತ್ತೀಸ್‌ಗಡ, ತಮಿಳುನಾಡು,ಕರ್ನಾಟಕ ಮತ್ತು ಉತ್ತರ ಪ್ರದೇಶ ಗರಿಷ್ಠ ಪ್ರಕರಣಗಳು ದಾಖಲಾಗಿರುವ ಇತರ ರಾಜ್ಯಗಳಲ್ಲಿ ಸೇರಿವೆ.
ಒಟ್ಟು ಸಕ್ರಿಯ ಪ್ರಕರಣಗಳ ಶೇ.62ರಷ್ಟು ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ,ಪ.ಬಂಗಾಳ ಮತ್ತು ಛತ್ತೀಸ್‌ಗಡ ಈ ಐದು ರಾಜ್ಯಗಳಿಂದ ವರದಿಯಾಗಿವೆ.





