ಗೆದ್ದ- ಸೋತ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಹೊಡೆದಾಟ: ಸ್ಥಳದಲ್ಲೇ ಮೊಕ್ಕಾಂ ಹೂಡಿದ ಪೊಲೀಸರು
ಬೆಳಗಾವಿ, ಜ.4: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತ ಅಭ್ಯರ್ಥಿಗಳ ನಡುವೆ ಗಲಾಟೆಯಾಗಿ ಎರಡೂ ಕಡೆಯ ಅಭ್ಯರ್ಥಿಗಳ ನೂರಾರು ಬೆಂಬಲಿಗರ ಮಧ್ಯೆ ಗುಂಪು ಘರ್ಷಣೆ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯ ಜಮೀನಿನಲ್ಲಿದ್ದ ಬೋರ್‍ವೆಲ್ ಅನ್ನು ಗೆದ್ದ ಅಭ್ಯರ್ಥಿ ಬಂದ್ ಮಾಡಿಸಿದ್ದರು. ಆಗ ಇಬ್ಬರ ಮಧ್ಯೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಮಹಿಳೆಯರು, ಪುರುಷರು, ಯುವಕರು ನೂರಾರು ಸಂಖ್ಯೆಯಲ್ಲಿ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಹತ್ತಾರು ಮಂದಿ ಮಹಿಳೆಯರು ಜಡೆ ಎಳೆದಾಡಿಕೊಂಡು ಹೊಡೆದಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ.
ಕೈಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಗಲಾಟೆ ನಡೆದು ಎರಡ್ಮೂರು ದಿನಗಳಾಗಿದ್ದು, ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟಪ್ರಭಾ ಠಾಣೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.





