ಅಸ್ಸಾಂಜೆಯನ್ನು ಅಮೆರಿಕಕ್ಕೆ ಗಡಿಪಾರು ಮಾಡುವಂತಿಲ್ಲ: ಬ್ರಿಟಿಷ್ ನ್ಯಾಯಾಲಯ

ಜೂಲಿಯನ್ ಅಸ್ಸಾಂಜೆ
ಲಂಡನ್,ಜ.4: ಬೇಹುಗಾರಿಕೆ ಆರೋಪಗಳಲ್ಲಿ ವಿಚಾರಣೆಯನ್ನು ಎದುರಿಸಲು ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆ(49)ಯನ್ನು ಗಡಿಪಾರುಗೊಳಿಸಬೇಕು ಎಂಬ ಅಮೆರಿಕದ ಮನವಿಯನ್ನು ಇಲ್ಲಿಯ ಓಲ್ಡ್ ಬೇಲಿ ಜಿಲ್ಲಾ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.
ಅಸ್ಸಾಂಜೆ ಆತ್ಮಹತ್ಯೆ ಮಾಡಿಕೊಳ್ಳುವ ಗಂಭೀರ ಅಪಾಯದಲ್ಲಿದ್ದಾರೆ. ಅವರನ್ನು ಅಮೆರಿಕಕ್ಕೆ ಗಡಿಪಾರುಗೊಳಿಸಿದರೆ ಜೈಲಿನ ಗರಿಷ್ಠ ಭದ್ರತೆಯ ಏಕಾಂತ ವಾಸದಲ್ಲಿ ಅಲ್ಲಿನ ‘ದಬ್ಬಾಳಿಕೆ’ಯ ಸ್ಥಿತಿಯಿಂದ ಅವರ ಖಿನ್ನತೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ ಎಂದು ನ್ಯಾ.ವನೆಸ್ಸಾ ಬರೈಟ್ಸರ್ ಹೇಳಿದರು. ನ್ಯಾಯಾಲಯವು ತನ್ನ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆ ಅಸ್ಸಾಂಜೆ ಬೆವರಿನಿಂದ ತೊಯ್ದಿದ್ದ ಹಣೆಯನ್ನು ಒರೆಸಿಕೊಂಡರೆ ಅವರ ಭಾವಿವಧು ಸ್ಟೆಲ್ಲಾ ಮಾರಿಸ್ ಕಣ್ಣೀರಾದರು. ಅವರನ್ನು ವಿಕಿಲೀಕ್ಸ್ನ ಮುಖ್ಯ ಸಂಪಾದಕ ಕ್ರಿಸ್ಟಿನ್ ರ್ಯಾಫ್ನಸನ್ ಸಂತೈಸಿದರು.
ಬೆಳಿಗ್ಗೆಯಿಂದಲೇ ನ್ಯಾಯಾಲಯದ ಹೊರಗೆ ಸೇರಿದ್ದ ಅಸ್ಸಾಂಜೆ ಬೆಂಬಲಿಗರು ಸಂಭ್ರಮಿಸಿದ್ದು,‘ಅಸ್ಸಾಂಜೆಯನ್ನು ಮುಕ್ತಗೊಳಿಸಿ’ ಎಂಬ ಘೋಷಣೆಗಳನ್ನೂ ಕೂಗಿದರು.
ಸುದೀರ್ಘ ಸಮಯದಿಂದ ಎಳೆದುಕೊಂಡು ಬಂದಿರುವ, ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ವ್ಯಾಪಕ ಆಸಕ್ತಿಯನ್ನು ಸೃಷ್ಟಿಸಿರುವ ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ಅಸ್ಸಾಂಜೆ ಮತ್ತು ಅವರ ವಕೀಲರು ಎಂದಿನಿಂದಲೂ ವಾದಿಸುತ್ತಿದ್ದಾರೆ.
ಒಂದು ದಶಕಕ್ಕೂ ಹೆಚ್ಚಿನ ಸಮಯದಿಂದ ಕಾನೂನು ವಿವಾದಗಳ ಬಳಿಕ ಸೋಮವಾರ ಈ ತೀರ್ಪು ಹೊರಬಿದ್ದಿದೆ.
ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸುವುದಾಗಿ ನೋಟಿಸನ್ನು ನೀಡಿರುವ ಅಮೆರಿಕ ಸರಕಾರವು,ತನ್ನ ಮೇಲ್ಮನವಿಯನ್ನು ಸಲ್ಲಿಸಲು ಎರಡು ವಾರಗಳ ಸಮಯಾವಕಾಶವನ್ನು ಹೊಂದಿದೆ.
ಬುಧವಾರ ಅಸ್ಸಾಂಜೆಯ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು,ಅಲ್ಲಿಯವರೆಗೆ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಅಮೆರಿಕದ ಜೈಲು ವ್ಯವಸ್ಥೆಯಲ್ಲಿನ ಸಂಭಾವ್ಯ ಕಠಿಣ ಸ್ಥಿತಿಯಲ್ಲಿ ಆಟಿಸಂ ಸ್ಪೆಕ್ಟ್ರಮ್ನಿಂದ ಬಳಲುತ್ತಿರುವ ಅಸ್ಸಾಂಜೆಯ ಮಾನಸಿಕ ಆರೋಗ್ಯವು ಇನ್ನಷ್ಟು ಹದಗೆಡುತ್ತದೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಅವರನ್ನು ಪ್ರಚೋದಿಸುತ್ತದೆ ಎಂದು ನ್ಯಾ.ಬರೈಟ್ಸರ್ ಹೇಳಿದರು.
ಅಸ್ಸಾಂಜೆ ಜೀವಕ್ಕೆ ಹಾನಿ ಮಾಡಿಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂಬ ಅಮೆರಿಕದ ಪರ ವಕೀಲರ ಹೇಳಿಕೆಯನ್ನು ತಿರಸ್ಕರಿಸಿದ ಬರೈಟ್ಸರ್,ವಾರ್ಡನ್ಗಳು ನಿಗಾಯಿರಿಸಿದ್ದರೂ ಅಮೆರಿಕದ ಕಳಂಕಿತ ಫೈನಾನ್ಸಿಯರ್ ಜೆಫ್ರಿ ಎಪ್ಸ್ಟೈನ್ರಂತಹ ಹಲವರು ಜೈಲುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದರು.
ಅಸ್ಸಾಂಜೆ ವಿರುದ್ಧದ ಪ್ರಕರಣವು ಅಮೆರಿಕದ ಪತ್ರಿಕಾ ಸ್ವಾತಂತ್ರ್ಯಕ್ಕೆ ದಶಕಗಳಲ್ಲಿಯೇ ಅತ್ಯಂತ ಅಪಾಯಕಾರಿ ಬೆದರಿಕೆಯಾಗಿದೆ ಎಂದು ಅಲ್ಲಿಯ ಫ್ರೀಡಂ ಆಫ್ ದಿ ಪ್ರೆಸ್ ಫೌಂಡೇಷನ್ ಹೇಳಿದರೆ,ಅಮೆರಿಕ ಸರಕಾರದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ದೇಶಭ್ರಷ್ಟರಾಗಿರುವ ಎಡ್ವರ್ಡ್ ಸ್ನೋಮನ್,ಸೋಮವಾರದ ತೀರ್ಪು ಅಸ್ಸಾಂಜೆ ವಿರುದ್ಧದ ಪ್ರಕರಣದ ಅಂತ್ಯವನ್ನು ಸೂಚಿಸಲಿದೆ ಎಂದು ಆಶಿಸಿದ್ದಾರೆ.
ಅಫಘಾನಿಸ್ತಾನ ಮತ್ತು ಇರಾನ್ಗಳಲ್ಲಿ ಅಮೆರಿಕ ಸೇನೆಯ ದೌರ್ಜನ್ಯಗಳನ್ನು ವಿವರಿಸುವ ಐದು ಲಕ್ಷ ರಹಸ್ಯ ಕಡತಗಳನ್ನು ವಿಕಿಲೀಕ್ಸ್ 2010ರಲ್ಲಿ ಸೋರಿಕೆ ಮಾಡಿದ್ದು,ಇದಕ್ಕಾಗಿ ಆಸ್ಟ್ರೇಲಿಯ ಮೂಲದ ಅಸ್ಸಾಂಜೆ 18 ಆರೋಪಗಳಲ್ಲಿ ಅಮೆರಿಕಕ್ಕೆ ಬೇಕಾದ ವ್ಯಕ್ತಿಯಾಗಿದ್ದಾರೆ.







