ನಿವೃತ್ತರ ಸೌಲಭ್ಯ ಒದಗಿಸುವಲ್ಲಿ ಖಜಾನೆಯಿಂದ ವಿಳಂಬವಿಲ್ಲ : ಉಡುಪಿಯಲ್ಲಿ ಪಿಂಚಣಿ ಅದಾಲತ್
ಉಡುಪಿ, ಜ.4: ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ, ನಿವೃತ್ತಿಯಾಗುತ್ತಲೇ ಪರಿವರ್ತಿತ ಮೊತ್ತ ಸೇರಿ ದಂತೆ ಇತರ ಸೌಲಭ್ಯಗಳನ್ನು ನಿವೃತ್ತರು ಪಡೆಯುವಲ್ಲಿ ಖಜಾನೆಯಿಂದ ವಿಳಂಬವಾಗದು. ನಿವೃತ್ತರ ಸೌಲಭ್ಯಕ್ಕಾಗಿ ನಿವೃತ್ತಿಯಾಗುವವರ ವಿವರ ಕ್ರಮವತ್ತಾಗಿ ನಿಯಮದಂತೆ ಸಕಾಲದಲ್ಲಿ ಖಜಾನೆಗೆ ಬಂದಲ್ಲಿ ವಿಳಂಬ ಮಾಡದೆ ಮಹಾಲೇಖಪಾಲರಿಗೆ ರವಾನಿಸಲಾಗುವುದು ಎಂದು ಉಡುಪಿ ಜಿಲ್ಲಾ ಖಜಾನೆಯ ಮುಖ್ಯಾಧಿಕಾರಿ ಪಿ.ಗೋಪಾಲಸ್ವಾಮಿ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಪಿಂಚಣಿ ಅದಾಲತ್‌ನಲ್ಲಿ ಅವರು ಮಾತನಾಡು ತಿದ್ದರು. ಮಂಜೂರಾಗಿ ಬಂದ ಸೌಲಭ್ಯಗಳು ನಿವೃತ್ತರಿಗೆ ಶೀಘ್ರ ತಲುಪು ವಂತೆ ಮಾಡುವಲ್ಲಿ ಖಜಾನೆಯಿಂದ ನಿಧಾನವಾಗದು. ಮಂಜೂರಾಗಿರುವ ಎಲ್ಲಾ ಹುದ್ದೆಗಳು ಭರ್ತಿಯಾಗಿಲ್ಲವಾದರೂ ನಿವೃತ್ತರು ಸೌಲಭ್ಯ ಪಡೆಯುವಲ್ಲಿ ಸಮಸ್ಯೆಗೆ ಅವಕಾಶವಿಲ್ಲದಂತೆ ಖಜಾನೆ ಕಾರ್ಯನಿರ್ವಹಿಸುತ್ತಿದೆ ಎಂದು ಖಜಾನೆಯ ಉಪನಿರ್ದೇಶಕರೂ ಆಗಿರುವ ಪಿ.ಗೋಪಾಲಸ್ವಾಮಿ ತಿಳಿಸಿದರು.
ಅದಾಲತಿನಲ್ಲಿ ಭಾಗವಹಿಸಿದ್ದ ಹೆಚ್ಚಿನ ನಿವೃತ್ತರು ಬ್ಯಾಂಕುಗಳಿಂದಾಗುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮಾತಾಡಿದರು. ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ, ಬ್ಯಾಂಕುಗಳ ಪಿಂಚಣಿ ವಿಭಾಗದ ಕುರಿತು ನಿವೃತ್ತರ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಮಾತಾಡಿದರು.
ಉಡುಪಿ ತಾಪಂ ಸಭಾಂಗಣದಲ್ಲಿ ಜಿಲ್ಲಾ ಖಜಾನೆ ವತಿಯಿಂದ ನಡೆದ ಅದಾಲತಿನಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಸೇರ್ವೆಗಾರ, ನಿವೃತ್ತರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಎಂ. ನಾರಾಯಣ ಭಟ್ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಮೀರಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.







