ಪ್ರತೀ 16 ಗಂಟೆಗೆ ಓರ್ವ ರೈತ ಪ್ರತಿಭಟನಾ ಸ್ಥಳದಲ್ಲಿ ಮೃತಪಡುತ್ತಿದ್ದಾರೆ: ರಾಜೇಶ್ ಟಿಕಾಯತ್
ಇದುವರೆಗೆ ಒಟ್ಟು 60 ರೈತರು ಮೃತ್ಯು

ಹೊಸದಿಲ್ಲಿ, ಜ. 4: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭ ಇದುವರೆಗೆ ಒಟ್ಟು 60 ರೈತರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಸೋಮವಾರ ಹೇಳಿದ್ದಾರೆ. ಪ್ರತಿ 16 ಗಂಟೆಗಳಲ್ಲಿ ಓರ್ವ ರೈತ ಸಾವನ್ನಪ್ಪುತ್ತಿದ್ದಾರೆ. ಉತ್ತರ ನೀಡುವುದು ಕೇಂದ್ರ ಸರಕಾರದ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರದೊಂದಿಗೆ ರೈತರ ಒಕ್ಕೂಟದ 18ನೇ ಸುತ್ತಿನ ಮಾತುಕತೆ ಹಿನ್ನೆಲೆ ಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಇಂದು ಹೊಸದಿಲ್ಲಿಯಲ್ಲಿ ರೈತರ ಮತ್ತು ಕೇಂದ್ರ ಸಚಿವರ ನಡುವೆ ಏಳನೆ ಸುತ್ತಿನ ಮಾತುಕತೆಯು ನಡೆದಿದ್ದು, ಇಲ್ಲೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆ ರದ್ದು ಮಾಡುವುದಿಲ್ಲ ಎಂದು ಸಚಿವರು ಹೇಳಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ಗೆ ತೆರಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ರೈತರ ಪ್ರತಿಭಟನೆಯು ಮುಂದುವರಿಯುತ್ತಲೇ ಇದ್ದು, ತೀವ್ರ ಚಳಿಯ ಕಾರಣದಿಂದ ಮೃತಪಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ ಎಂದು ತಿಳಿದು ಬಂದಿದೆ.







