ಪೊಂಗಲ್ ಹಿನ್ನೆಲೆಯಲ್ಲಿ ಸಿನೆಮಾ ಮಂದಿರದಲ್ಲಿ ಶೇ. 100 ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಅನುಮತಿ
ತಜ್ಞರ ವಿರೋಧ

ಚೆನ್ನೈ, ಜ. 4: ಪೊಂಗಲ್ ಹಿನ್ನೆಲೆಯಲ್ಲಿ ಸಿನೆಮಾ ಮಂದಿರಗಳಲ್ಲಿ ಶೇ. 100 ಪ್ರೇಕ್ಷಕರು ಚಿತ್ರ ವೀಕ್ಷಿಸಲು ತಮಿಳುನಾಡು ಸರಕಾರ ಸೋಮವಾರ ಅನುಮತಿ ನೀಡಿದೆ. ಆದರೆ, ಇದಕ್ಕೆ ಸಾರ್ವಜನಿಕ ಆರೋಗ್ಯ ಇಲಾಖೆಯ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಕೊರೋನ ಸೋಂಕು ಇನ್ನಷ್ಟು ಹೆಚ್ಚಾಗಲು ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ತನ್ನ ಸಿನೆಮಾ ‘ಮಾಸ್ಟರ್’ ಜನವರಿ 13ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ನಟ ವಿಜಯ್ ಸಿನೆಮಾ ಮಂದಿರಗಳಲ್ಲಿ ಶೇ. 100 ಪ್ರೇಕ್ಷಕರು ಚಿತ್ರ ವೀಕ್ಷಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಎಡಪಾಡಿ ಕೆ. ಪಳನಿಸ್ವಾಮಿ ಅವರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿನೆಮಾ ಮಂದಿರದಲ್ಲಿ ಶೇ. 100 ಪ್ರೇಕ್ಷಕರು ಚಿತ್ರ ವೀಕ್ಷಿಸಲು ತಮಿಳುನಾಡು ಸರಕಾರ ಅನುಮತಿ ನೀಡಿತ್ತು. ವಿಜಯ್ ನಟನೆಯ ‘ಮಾಸ್ಟರ್’ ಚಿತ್ರದೊಂದಿಗೆ ಸಿಲಂಬರಸನ್ ಅವರ ‘ಈಶ್ವರನ್’ ಸಿನೆಮಾ ಕೂಡ ಅದೇ ದಿನ ಬಿಡುಗಡೆಯಾಗಲಿದೆ. ಆದರೆ, ವೈದ್ಯಕೀಯ ನೆಲೆಯಲ್ಲಿ ಗಂಟೆಗಳ ದೀರ್ಘ ಕಾಲ ಮುಚ್ಚಿದ ಸ್ಥಳದಲ್ಲಿ ಇರುವುದು ಸುರಕ್ಷಿತವಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಿನೆಮಾ ಮಂದಿರಗಳಲ್ಲಿ ಶೇ. 100 ಪ್ರೇಕ್ಷಕರಿಗೆ ಚಿತ್ರ ವೀಕ್ಷಣೆಗೆ ಅನುಮತಿ ನೀಡುವುದು ಈ ಪರಿಸ್ಥಿತಿಯಲ್ಲಿ ಸೂಕ್ತವಾದುದಲ್ಲ. ಇದು ಕೊರೋನ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಲು ಕಾರಣವಾಗಬಹುದು ಎಂದು ಅಪೊಲೊ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ತಜ್ಞ ರಾಮ್ ಗೋಪಾಲಕೃಷ್ಣನ್ ಹೇಳಿದ್ದಾರೆ. ‘‘ಒಳಾಂಗಣ ಪ್ರದೇಶದಲ್ಲಿ ಹೆಚ್ಚಿನ ಜನರು ಸೇರುವುದರಿಂದ ಕೊರೋನ ಪ್ರಕರಣಗಳ ಸಂಖ್ಯೆ ಖಂಡಿತವಾಗಿ ಹೆಚ್ಚಾಗಲಿದೆ. ಇದಕ್ಕಿಂತ ಕೊರೋನ ಲಸಿಕೆ ದೊರಕಿದ ಬಳಿಕ ಮುಂದುವರಿಯುವುದು ಉತ್ತಮ’’ ಎಂದು ಅವರು ಹೇಳಿದ್ದಾರೆ.







