ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪಕ್ಕೆ ಸಿಎಂ ಸಮ್ಮುಖದಲ್ಲೇ ಹಿರಿಯ ಶಾಸಕರ ಆಕ್ರೋಶ

ವಿಜಯೇಂದ್ರ
ಬೆಂಗಳೂರು, ಜ. 4: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಉತ್ತರ ಕರ್ನಾಟಕ ಭಾಗದ ಹಿರಿಯ ಶಾಸಕರರು, ಸಿಎಂ ಸಮ್ಮುಖದಲ್ಲೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಮಾತನಾಡಿದ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಶಾಸಕ, ನಿಮ್ಮ ಬಳಿ ಮಾತನಾಡಬೇಕು. ಆದರೆ, ನಾನು ನಿಮ್ಮ ಮಗನ ಬಳಿ ಯಾಕೆ ಮಾತಾಡಬೇಕೆಂದು ಪ್ರಶ್ನೆ ಮಾಡಿದ್ದಾರೆಂದು ಗೊತ್ತಾಗಿದೆ.
ಎಲ್ಲದಕ್ಕೂ ಮಗನ ಮಾತೇ ಅಂತಿಮ ಮಾಡುವುದಾದರೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪಾಡೇನು? ಹಾಗೂ ಹಿರಿಯ ಮುಖಂಡರು ಏನು ಮಾಡಬೇಕು. ನೀವು ಹಿರಿಯರಾಗಿ ಎಲ್ಲದಕ್ಕೂ ತಲೆದೂಗಿದರೆ ಹೇಗೆ? ಆಡಳಿತದಲ್ಲಿ ಮಗನ ಹಸ್ತಕ್ಷೇಪ ಕಡಿಮೆ ಮಾಡಬೇಕು ಎಂದು ಯತ್ನಾಳ್, ಸಿಎಂಗೆ ಸಲಹೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಇದೇ ವೇಳೆ ಮಾತನಾಡಿದ ಹಿರಿಯ ಶಾಸಕ ಉಮೇಶ್ ಕತ್ತಿ, ಯಾವುದೇ ಕ್ಷೇತ್ರದಲ್ಲಾಗಲಿ ಅಥವಾ ಬೆಂಗಳೂರಿನಲ್ಲಾಗಲಿ ಮಕ್ಕಳನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಶಾಸಕರ ಸಮಸ್ಯೆಗಳಿದ್ದರೆ ಅವುಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆಂದು ಹೇಳಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕರಿಗೆ ಸಿಎಂ ಅಧಿಕೃತ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ಪ್ರವೇಶಕ್ಕೆ ಮುಕ್ತ ಅವಕಾಶವಿದೆ. ಯಾವುದೇ ಕಾರಣಕ್ಕೂ ವಿಜಯಪುರದಲ್ಲೊಂದು, ಬೆಂಗಳೂರಲ್ಲೊಂದು ಹೇಳಿಕೆ ನೀಡಿ ಪಕ್ಷ ಹಾಗೂ ಸರಕಾರದ ಇಮೇಜ್ಗೆ ಧಕ್ಕೆ ತರಬೇಡಿ ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.







