ಉಡುಪಿ ಜಿಲ್ಲೆಯಲ್ಲಿ ಹೆಚ್ಚಿದ ವಾಹನಗಳ ಸಂಖ್ಯೆ: ಮೂರು ದಿನದಲ್ಲಿ 15 ಅಪಘಾತಗಳು, 8 ಮಂದಿ ಮೃತ್ಯು!

ಫೈಲ್ ಫೋಟೊ
ಉಡುಪಿ, ಜ.4: ಹೊಸವರ್ಷಕ್ಕೆ ಪಾರ್ದಾಪಣೆ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಅಪಘಾತಗಳ ಸುದ್ದಿಗಳೇ ಹೆಚ್ಚಾಗಿ ಕೇಳು ಬರುತ್ತಿವೆ. ಹೊಸ ವರ್ಷ ಆಚರಣೆಯ ರಾತ್ರಿಯಿಂದ ಜ.3ರವರೆಗಿನ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ 15 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಏಳು ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಎಂಟು ಮಂದಿ ಮೃತಪಟ್ಟಿದ್ದರೆ, 10 ಇತರ ಅಪಘಾತಗಳಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಮೃತ ಏಳು ಮಂದಿಯಲ್ಲಿ ಐದು ಮಂದಿ ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ಮತ್ತು ರಸ್ತೆಯಲ್ಲಿದ್ದ ಪಾದಚಾರಿಗಳಾಗಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊಸ ವರ್ಷ ಆಚರಣೆಗಾಗಿ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಬರೆಯುತ್ತಿದ್ದ ಇಬ್ಬರು ಅಪಘಾತಕ್ಕೆ ಬಲಿಯಾಗಿದ್ದಾರೆ. ಕಾಪು ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಗಾಳದಲ್ಲಿ ಜ.3ರಂದು ಒಂದೇ ದಿನ ಇಬ್ಬರು ಪಾದಚಾರಿಗಳು ಮೃತಪಟ್ಟರೆ, ಬೈಂದೂರು ಪೊಲೀಸ್ ಠಾಣೆಯಲ್ಲಿ ಓರ್ವ ಪಾದಚಾರಿ ಅಪಘಾತಕ್ಕೆ ಸಾವನ್ನಪ್ಪಿದ್ದಾರೆ. ಉಳಿದಂತೆ ಮಲ್ಪೆ, ಕಾರ್ಕಳ ಗ್ರಾಮಾಂತರ, ಪಡುಬಿದ್ರೆ ತಲಾ ಒಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ವಾಹನ ಸಂಖ್ಯೆ ಹೆಚ್ಚಳ: ಕೊರೋನ ಭೀತಿಯ ನಂತರ ಉಡುಪಿ ಜಿಲ್ಲೆ ಯಲ್ಲಿ ವಾಹನ ಸಂಖ್ಯೆಗಳ ದುಪ್ಪಟ್ಟು ಹೆಚ್ಚಾಗಿದೆ. ಇದುವೇ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ಕೊರೋನ ಬಳಿಕ ಜನ ಬಸ್ಗಳಲ್ಲಿ ಓಡಾಟ ಕಡಿಮೆ ಮಾಡಿ ಸ್ವಂತ ವಾಹನಗಳ ಖರೀದಿಗೆ ಒಲವು ತೋರಿಸುತ್ತಿದ್ದಾರೆ. ಇದರ ಪರಿಣಾಮ ಜಿಲ್ಲೆ ಯಲ್ಲಿ ಕಳೆದ 9 ತಿಂಗಳಲ್ಲಿ ಹೊಸ ವಾಹನಗಳ ಖರೀದಿ ಸಂಖ್ಯೆ ಹೆಚ್ಚಾಗಿದೆ. ಹೀಗೆ ವಾಹನಗಳ ದಟ್ಟಣೆಯಿಂದ ಅಪಘಾತಗಳು ಕೂಡ ಹೆಚ್ಚು ಹೆಚ್ಚು ಸಂಭವಿಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥಗೊಂಡ ಬಳಿಕ ಹೆಚ್ಚಿನ ವಾಹನ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚಾರ ನಿಯಮ ಗಳನ್ನು ಪಾಲಿಸುತ್ತಿಲ್ಲ. ವಾಹನಗಳು ಅತೀ ವೇಗ, ನಿರ್ಲಕ್ಷತನದ ಚಾಲನೆ ಮತ್ತು ವಿರುದ್ಧ ದಿಕ್ಕಿನಲ್ಲಿ ಮತ್ತು ಏಕಾಏಕಿ ರಸ್ತೆ ದಾಟುವುದು ಎಲ್ಲ ಕಡೆಗಳಲ್ಲಿ ಕಂಡುಬರುತ್ತಿದೆ. ಹಾಗೆಯೇ ಜನರು ಕೂಡ ಸರಿಯಾಗಿ ಗಮನಿಸದೆ ರಸ್ತೆ ದಾಟುವುದರಿಂದ ಹೆಚ್ಚಿನ ಸಾವುನೋವುಗಳು ಸಂಭವಿಸುತ್ತಿವೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ತಿಳಿಸಿದ್ದಾರೆ.
‘ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಅಪಘಾತ ಹೆಚ್ಚಾಗುತ್ತಿವೆ. ಇದಕ್ಕೆ ವಾಹನ ಸಂಖ್ಯೆಯಲ್ಲಿ ಹೆಚ್ಚಳ, ಯಾವುದೇ ನಿಯಮ ಪಾಲನೆ ಮಾಡದಿರುವುದು ಮತ್ತು ನಿರ್ಲಕ್ಷವೇ ಕಾರಣ. ಈ ನಿಟ್ಟಿನಲ್ಲಿ ವಾಹನ ಚಾಲಕರು ಸಾಕಷ್ಟು ಎಚ್ಚರ ವಹಿಸಬೇಕಾಗಿದೆ’
-ಕುಮಾರಚಂದ್ರ, ಹೆಚ್ಚುವರಿ ಎಸ್ಪಿ, ಉಡುಪಿ ಜಿಲ್ಲೆ
'ಬೈಂದೂರು ಮತ್ತು ಕುಂದಾಪುರ ವ್ಯಾಪ್ತಿಯಲ್ಲಿಯೂ ಅಫಘಾತಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ 3 ಮೂರು ದಿನಗಳಲ್ಲಿ 3 ಅಪಘಾತಕ್ಕೆ ಸಂಬಂಧಿಸಿದ ಕರೆಗಳು ನನಗೆ ಬಂದಿದೆ. ಅಪಘಾತ ತಡೆಯಲು ಜಂಕ್ಷನ್ ಗಳಲ್ಲಿ ದೀಪದ ವ್ಯವಸ್ಥೆ ಆಗಬೇಕು. ಪಾದಚಾರಿಗಳು ರಸ್ತೆ ದಾಟುವಾಗ ತುಂಬಾ ಜಾಗರೂಕ ರಾಗಿರಬೇಕು. ಚಾಲಕರು ಜಂಕ್ಷನ್ಗಳಲ್ಲಿ ನಿಧಾನವಾಗಿ ವಾಹನ ಚಲಾಯಿಸಬೇಕು. ಎದುರಿನ ವಾಹನ ಚಾಲಕರಿಗೆ ತುಂಬಾ ಅಪಾಯಕಾರಿಯಾಗಿರುವ ಹೈ ಬೀಮ್ ದೀಪ ಉಪಯೋಗ ಎಲ್ಲ ಸಂದರ್ಭದಲ್ಲಿ ಮಾಡಬಾರದು. ಕೆಟ್ಟು ನಿಲ್ಲುವ ವಾಹನಗಳನ್ನು ಹೆದ್ದಾರಿಗಿಂತ ದೂರ ನಿಲ್ಲಿಸುವ ವ್ಯವಸ್ಥೆ ಆಗಬೇಕು.
-ಇಬ್ರಾಹಿಂ ಎಂ.ಎಚ್. ಗಂಗೊಳ್ಳಿ, ಆ್ಯಂಬುಲೆನ್ಸ್ ಚಾಲಕ







