ಐಬಿಎಚ್ ಪ್ರಕಾಶನ ಸಂಸ್ಥೆಗೆ 2019ನೆ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ
ಬೆಂಗಳೂರು, ಜ.4: ಕನ್ನಡ ಪುಸ್ತಕ ಪ್ರಾಧಿಕಾರವು ವಾರ್ಷಿಕವಾಗಿ ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ 2019ನೆ ಸಾಲಿನಲ್ಲಿ ಬೆಂಗಳೂರಿನ ಐಬಿಎಚ್ ಪ್ರಕಾಶನ ಸಂಸ್ಥೆ ಆಯ್ಕೆಯಾಗಿದೆ.
ಡಾ.ಜೆ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಸಿಂದಗಿಯ ಡಾ.ಎಂ.ಎಂ.ಪಡಶೆಟ್ಟಿ, ಬೆಂಗಳೂರಿನ ಕೆ.ರಾಜಕುಮಾರ್ ಆಯ್ಕೆಯಾಗಿದ್ದಾರೆ. ಡಾ.ಬಸವರಾಜ ಕಲ್ಗುಡಿ ಅವರು ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಹಾಗೂ ಮಂಗಳೂರಿನ ಡಾ.ಬಿ.ಎಂ.ಹೆಗ್ಡೆ ಅವರು ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯು 1 ಲಕ್ಷ ರೂ.ನಗದು, ಫಲಕ, ಪುತ್ಥಳಿ ಒಳಗೊಂಡಿದೆ. ಡಾ.ಜೆ.ಪಿ.ರಾಜರತ್ನ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ, ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗಳು ಕ್ರಮವಾಗಿ 75 ಸಾವಿರ ರೂ., 50 ಸಾವಿರ ರೂ., 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪುತ್ಥಳಿಗಳನ್ನು ಒಳಗೊಂಡಿದೆ. ಇದೇ 6ರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಲಿದೆ.
ಪುಸ್ತಕ ಸೊಗಸು ಬಹುಮಾನ:
* ಮೊದಲನೆ ಬಹುಮಾನ: ಬೆಂಗಳೂರಿನ ಸಪ್ನ ಬುಕ್ ಹೌಸ್-ಮೊತ್ತ 25 ಸಾವಿರ, ಕೃತಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಮಾನವನ ಮಹಾಯಾನ
* ಎರಡನೆ: ತುಮಕೂರಿನ ನಮ್ಮ ಪ್ರಕಾಶನ-ಮೊತ್ತ 20 ಸಾವಿರ, ಕೃತಿ ಭೂಮಿಯೊಂದು ಮಹಾಬೀಜ
* ಮೂರನೆ: ಮೈಸೂರಿನ ಅಭಿರುಚಿ ಪ್ರಕಾಶನ-ಮೊತ್ತ 10 ಸಾವಿರ, ಕೃತಿ ಬಂಗಾರದ ಮನುಷ್ಯರು-ಬೆಳಕಿನ ಬೇಸಾಯದ ಕಥಾನಕ
* ಮಕ್ಕಳ ಪುಸ್ತಕ ಸೊಗಸು ಬಹುಮಾನ: ಹಾಸನದ ಚೈತ್ರೋದಯ ಪ್ರಕಾಶನ-ಮೊತ್ತ 8 ಸಾವಿರ, ಕೃತಿ ಅರಳುವ ಹೂಗಳು
* ಮುಖಪುಟ ಚಿತ್ರ ವಿನ್ಯಾಸ ಬಹುಮಾನ: ಬೆಂಗಳೂರಿನ ಶ್ರೀಕಿರಣ್ ಮಾಡಾಲು-ಮೊತ್ತ 10 ಸಾವಿರ, ಕೃತಿ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ
* ಮುಖಪುಟ ಚಿತ್ರ ಕಲೆಯ ಬಹುಮಾನ: ಗದಗ ಜಿಲ್ಲೆಯ ಶ್ರೀಪುಂಡಲೀಕ ಕಲ್ಲಿಗನೂರು-ಮೊತ್ತ 8 ಸಾವಿರ, ಕೃತಿ ಮಹಾವೃಕ್ಷ
* ಪುಸ್ತಕ ಮುದ್ರಣ ಸೊಗಸು: ಮಂಗಳೂರಿನ ಆಕೃತಿ ಪ್ರಿಂಟ್ಸ್-ಮೊತ್ತ 5 ಸಾವಿರ, ವನ್ಯವರ್ಣ ಕೃತಿ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.







